ಸಂಡೂರು ಉಪ ಚುನಾವಣೆ: ಅಕ್ರಮದ ಬಗ್ಗೆ ಸಿ-ವಿಜಿಲ್‌ನಲ್ಲಿ ದೂರು ನೀಡುವುದು ಹೇಗೆ?
ಬಳ್ಳಾರಿ, ಅಕ್ಟೋಬರ್ 28: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದೆ. ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಅಕ್ರಮ ತಡೆಯಲು ಭಾರತದ ಚುನಾವಣಾ ಆಯೋಗ ಸಿ-ವಿಜಿಲ್ (C-Vigil) ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಅಕ್ರಮಗಳ ಕುರಿತು ಜನರು ಅಪ್ಲಿಕೇಶನ್ ಮೂಲಕವೂ ದೂರು ನೀಡಬಹುದು.
ಇತ್ತೀಚೆಗೆ ಎಲ್ಲರ ಬಳಿಯು ಸ್ಮಾರ್ಟ್‌ಫೋನ್ ಇದೆ. ಅಂಗೈ ತುದಿಯಲ್ಲಿ ಎಲ್ಲಾ ಮಾಹಿತಿ ವೀಕ್ಷಿಸಬಹುದು. ಸಿ-ವಿಜಿಲ್‌ನೊಂದಿಗೆ, ನಿಮ್ಮ ಸ್ಮಾರ್ಟ್ ಫೋನ್‌ನಿಂದ ನೇರವಾಗಿ ಮಾದರಿ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿದೆ. ನಿಮ್ಮ ವರದಿ ಚುನಾವಣೆ ಅಕ್ರಮಗಳನ್ನು ತಡೆಯಲು ಸಹಾಯ ಮಾಡುತ್ತದೆ.

ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾರ್ವಜನಿಕರ ಸಹಭಾಗಿತ್ವವೂ ಅತ್ಯಮೂಲ್ಯವಾಗಿದೆ. ಅದೇರೀತಿಯಾಗಿ ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಮತ್ತು ಚುನಾವಣಾ ಅಕ್ರಮ ತಡೆಯಲು ಚುನಾವಣಾ ಆಯೋಗವು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.
ಮತಕ್ಕಾಗಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವವರನ್ನು ಪೋಲಿಸರಿಗೆ ತಿಳಿಸುವುದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಗಟ್ಟಲು ಜನರು ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ ದೂರು ನೀಡಬಹುದು ಎಂದು ತಿಳಿಸಲಾಗಿದೆ.
ದೂರು ನೀಡುವುದು ಹೇಗೆ?; ಮೊದಲು ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನೀವು ಸಾಕ್ಷಿಯಾಗಿರುವ ಯಾವುದೇ ಚುನಾವಣಾ ಸಂಬಂಧಿತ ಉಲ್ಲಂಘನೆಗಳ ಫೋಟೋಗಳು ಅಥವಾ ವಿಡಿಯೋಗಳನ್ನು ಸೆರೆಹಿಡಿಯಿರಿ. ನಿಮ್ಮ ವರದಿಯನ್ನು ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡಿ, ಘಟನೆ ಮತ್ತು ಸ್ಥಳದ ವಿವರಗಳನ್ನು ಒದಗಿಸಿ. ನಿಮ್ಮ ವರದಿಯನ್ನು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ರವಾನಿಸಲಾಗುತ್ತದೆ.
ಆಪ್ ಓಪನ್ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯ ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಸಂದರ್ಭದಲ್ಲಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋವನ್ನು (2 ನಿಮಿಷ) ಸೆರೆಹಿಡಿದು ಈ ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಲ್ಲಿನ ವಿಳಾಸವನ್ನು ನಮೂದಿಸಬೇಕು. ಜೊತೆಗೆ ಇದು ಸಂಪೂರ್ಣ ಉಚಿತವಾಗಿರಲಿದೆ.
ವ್ಯಕ್ತಿಯೊಬ್ಬರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದನಾಕಾರಿ ಭಾಷಣ, ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲೂ ಪ್ರಚಾರ, ಮತದಾನದ ದಿನದಂದು ಮತದಾರರನ್ನು ಸಾಗಿಸುವುದು ಹೀಗೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ದೂರು ಕೊಡಬಹುದು.
ಆಪ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗೆ ಅಧಿಕಾರಿಗಳ ಉತ್ತರ ಸಿಗಲಿದೆ. ಇದರಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಆಮಿಷಗಳು ಸಾಕ್ಷಿ ಸಮೇತ ದಾಖಲಾಗಲಿವೆ. ದೂರಿನೊಂದಿಗೆ ಸೆರೆಹಿಡಿಯಲಾದ ಜಿಪಿಎಸ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೆಯಿಂಗ್ ಸ್ಕ್ವಾಡ್ ತಂಡಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಅನುಕೂಲ ಮಾಡಿಕೊಡಲಿದೆ.
ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈಗಾಗಲೇ ಸಿ-ವಿಜಿಲ್ ತಂಡ ಕಾರ್ಯಗತವಾಗಿದೆ. ಸಂಡೂರು ವಿಧಾನಸಭೆ ಉಪಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 16 ದೂರುಗಳು ಸಿ-ವಿಜಿಲ್ ಮುಖಾಂತರ ದಾಖಲಾಗಿದ್ದು, 13 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ.











Click it and Unblock the Notifications