Breaking News: ಸಂಡೂರು ಉಪ ಚುನಾವಣೆ, ಕರ್ನಾಟಕ ಬಿಜೆಪಿ ಮಹತ್ವದ ಘೋಷಣೆ
ಬಳ್ಳಾರಿ, ಸೆಪ್ಟೆಂಬರ್ 11: ಲೋಕಸಭೆ ಚುನಾವಣೆ 2024ರ ಬಳಿಕ ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಸಹ ಒಂದು. ಸಂಡೂರು ವಿಧಾನಸಭಾ ಕ್ಷೇತ್ರದಿಂದ 2023ರ ಚುನಾವಣೆಯಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ನಾಯಕ ಇ. ತುಕಾರಾಂ ಬಳ್ಳಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣಾ ಆಯೋಗ ಸಂಡೂರು ಉಪ ಚುನಾವಣೆ ದಿನಾಂಕ ಘೋಷಣೆ ಮಾಡಬಹುದು.
ಕರ್ನಾಟಕ ಬಿಜೆಪಿ ಸಂಡೂರು ಉಪ ಚುನಾವಣೆ ಕುರಿತು ಬುಧವಾರ ಮಹತ್ವದ ಘೋಷಣೆ ಮಾಡಿದೆ. ಸಂಡೂರಿನಲ್ಲಿ ಮಾತನಾಡಿದ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಈ ಘೋಷಣೆಯನ್ನು ಮಾಡಿದ್ದು, ಅವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.

ರಾಧಾ ಮೋಹನ್ ದಾಸ್ ಅಗರ್ವಾಲ್, "ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಬಿ. ಶ್ರೀರಾಮುಲು ಬಿಜೆಪಿಯ ಅಭ್ಯರ್ಥಿಯಲ್ಲ. ಅವರು ಟಿಕೆಟ್ ಆಕಾಂಕ್ಷಿಯೂ ಅಲ್ಲ. ಅವರನ್ನು ನಾವು ಬಳ್ಳಾರಿಯ ಸಂಸದರಾಗಿ ಮಾಡುತ್ತೇವೆ" ಎಂದು ಘೋಷಣೆ ಮಾಡಿದರು.
2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಿ. ಶ್ರೀರಾಮುಲು ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಬಿಜೆಪಿ ಬುಧವಾರ ಮಾಡಿರುವ ಘೋಷಣೆ ಅಚ್ಚರಿಗೆ ಕಾರಣವಾಗಿದೆ.
ಸಂಡೂರು ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಶಿಲ್ಪಾ ರಾಘವೇಂದ್ರ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು 49701 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್‌ನ ಇ. ತುಕಾರಾಂ 85223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ಇ. ತುಕಾರಾಂ ಮತ್ತು ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಎದುರಾಳಿಯಾಗಿದ್ದರು. ಇ. ತುಕಾರಾಂ 730845 ಮತಗಳನ್ನು ಪಡೆದು ಜಯಗಳಿಸಿದರು. ಬಿ. ಶ್ರೀರಾಮುಲು 631853 ಮತಗಳನ್ನು ಪಡೆದು ಸೋಲು ಕಂಡರು.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಇ. ತುಕಾರಾಂ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಜೂನ್ 24ರಂದು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ಸಂಡೂರು ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್‌ನಿಂದ ಇ. ತುಕಾರಾಂ ಪುತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಬಿಜೆಪಿ ಬಿ. ಶ್ರೀರಾಮುಲು ಕಣಕ್ಕಿಳಿಸುವುದಿಲ್ಲ ಎಂದು ಹೇಳಿ ಅಚ್ಚರಿಯನ್ನು ಮೂಡಿಸಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬಿ. ಶ್ರೀರಾಮುಲು 2023ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿದ ಅವರು 74536 ಮತಗಳನ್ನು ಪಡೆದು ಸೋಲು ಕಂಡರು. ಕಾಂಗ್ರೆಸ್‌ನ ಬಿ. ನಾಗೇಂದ್ರ 103836 ಮತಗಳನ್ನು ಪಡೆದು ಜಯಗಳಿಸಿದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆದರು.
ಆದರೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವರಾಗಿದ್ದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದರು. ಬಳಿಕ ಅವರನ್ನು ಇಡಿ ಬಂಧಿಸಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಂಡೂರು ಉಪ ಚುನಾವಣೆಗೆ ಬಿ. ಶ್ರೀರಾಮುಲು ಅಭ್ಯರ್ಥಿಯಲ್ಲ ಎಂದು ಬಿಜೆಪಿ ಘೋಷಣೆ ಮಾಡಿದೆ. ಹಾಗಾದರೆ ಬಿಜೆಪಿ ಟಿಕೆಟ್ ಯಾರಿಗೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications