Sandur By elections: ಉಪ ಚುನಾವಣೆ ಚಿತ್ರಣ ಅಂತಿಮ, ಎಲ್ಲಾ ನಾಮಪತ್ರ ಕ್ರಮಬದ್ಧ
ಬಳ್ಳಾರಿ, ಅಕ್ಟೋಬರ್ 29: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚಿತ್ರಣ ಬಹುತೇಕ ಅಂತಿಮಗೊಂಡಿದೆ. ನವೆಂಬರ್ 13ರಂದು ನಡೆಯಲಿರುವ ಉಪ ಚುನಾವಣೆಗೆ 7 ಅಭ್ಯರ್ಥಿಗಳು ಸಲ್ಲಿಕೆ ಮಾಡಿದ್ದ ನಾಮಪತ್ರಗಳು ಕ್ರಮಬದ್ಧವಾಗಿದೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 30 ಕೊನೆಯ ದಿನವಾಗಿದೆ. ಚುನಾವಣಾ ಫಲಿತಾಂಶ ನವೆಂಬರ್ 23ರಂದು ಪ್ರಕಟವಾಗಲಿದೆ.
ಸಂಡೂರು ಉಪ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಕ್ಷೇತ್ರಕ್ಕೆ ಸಲ್ಲಿಸಿದ್ದ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಅಕ್ಟೋಬರ್ 30ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಯಾವುದೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯದಿದ್ದರೆ ಏಳು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದೆ.
ಯಾವ-ಯಾವ ಅಭ್ಯರ್ಥಿಗಳು?; ಸಂಡೂರು ವಿಧಾನಸಭೆ ಉಪ ಚುನಾವಣೆಗೆ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಟಿ. ಎಂ. ಮಾರುತಿ, ಎನ್. ವೆಂಕಣ್ಣ, ಟಿ. ಎರ‍್ರಿಸ್ವಾಮಿ, ಬಂಗಾರಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಂಗಾರಿ ಹನುಮಂತ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಈ. ಅನ್ನಪೂರ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನವೆಂಬರ್ 13ರಂದು ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣದ ಉಪ ಚುನಾವಣೆ ನಡೆಯಲಿದೆ. ಮೂರು ಕ್ಷೇತ್ರಗಳಿಗೆ 121 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ನಾಮಪತ್ರಗಳ ಪರಿಶೀಲನೆ ವೇಳೆ 24 ನಾಮಪತ್ರಗಳು ತಿರಸ್ಕಾರಗೊಂಡಿವೆ. ಸಂಡೂರಿನಲ್ಲಿ 7, ಶಿಗ್ಗಾವಿ 19, ಚನ್ನಪಟ್ಟಣದಲ್ಲಿ 38 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ.
ಶಿಗ್ಗಾವಿ ಕಾಂಗ್ರೆಸ್ ಕುತೂಹಲ: ಮೂರು ಕ್ಷೇತ್ರಗಳ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಕಣ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ. ಆದರೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಅಜ್ಜಂಪೀರ್ ಖಾದ್ರಿ, ಮಂಜುನಾಥ್ ಕುನ್ನೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮಂಜುನಾಥ್ ಕುನ್ನೂರು ನಾಮಪತ್ರ ಸೋಮವಾರ ತಿರಸ್ಕಾರಗೊಂಡಿದೆ. ಅಜ್ಜಂಪೀರ್ ಖಾದ್ರಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂಧಾನ ನಡೆಸಿದ್ದಾರೆ. ಅಕ್ಟೋಬರ್ 30ರಂದು ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಶಿಗ್ಗಾವಿಯಲ್ಲಿ ಬಿಜೆಪಿಯ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ. ಅಜ್ಜಂಪೀರ್ ಖಾದ್ರಿ ನಾಮಪತ್ರವನ್ನು ವಾಪಸ್ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಹಾದಿ ಸುಗಮವಾಗಲಿದೆ.
ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದ ಉಪ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದಿಂದ ಸಿ. ಪಿ. ಯೋಗೇಶ್ವರ ಕಣದಲ್ಲಿದ್ದಾರೆ. ಯಾರಿಗೆ ಗೆಲುವು? ಎಂಬ ಲೆಕ್ಕಾಚಾರ ನಡೆದಿದೆ.












Click it and Unblock the Notifications