Sandur By Election: ಸಂಡೂರು ಉಪ ಚುನಾವಣೆ, ಸ್ಟ್ರಾಂಗ್ ರೂಮ್‌ಗೆ ಬಿಗಿ ಪೊಲೀಸ್ ಬಂದೋಬಸ್ತ್
ಬಳ್ಳಾರಿ, ನವೆಂಬರ್ 16: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ- 2024 ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 6 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ. ಉಪ ಚುನಾವಣೆಯಇವಿಎಂಗಳು ಇರುವ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಂಡೂರು ಕ್ಷೇತ್ರದಲ್ಲಿ ನವೆಂಬರ್ 13ರ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿತ್ತು. ಶೇ 76.24 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಕ್ಷೇತ್ರದ ವ್ಯಾಪ್ತಿಯ 253 ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ನಿಯಮದಂತೆ ಮತದಾನ ಪ್ರಕ್ರಿಯೆಯು ಬೆಳಿಗ್ಗೆ 7 ಗಂಟೆಗೆ ಪ್ರಾರಂಭಗೊಂಡಿತ್ತು. ನಿಧಾನಗತಿಯಿಂದ ಆರಂಭವಾದ ಮತದಾನ ಸಂಜೆ ಹೊತ್ತಿಗೆ ಬಿರುಸು ಪಡೆಯಿತು. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡುಬಂದಿತು.

ಮತ ಯಂತ್ರಗಳನ್ನು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಡಲಾಗಿದೆ. ನವೆಂಬರ್ 23ರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಮತಯಂತ್ರಗಳನ್ನು ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಮತಯಂತ್ರಗಳ ಸ್ಟ್ರಾಂಗ್ ರೂಂ ಬಾಗಿಲಿಗೆ ಬೀಗ ಹಾಕಿ ಮೊಹರು ಹಾಕಲಾಯಿತು. ಜೊತೆಗೆ ಬಾಗಿಲನ್ನು ದಪ್ಪ ಹಲಗೆಯ ಮೂಲಕ ಸಂಪೂರ್ಣ ಮುಚ್ಚಿ ಸೀಲ್ ಮಾಡಲಾಯಿತು. ಮತ ಎಣಿಕೆ ಕೇಂದ್ರ ಸುತ್ತಲೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ಸಿಸಿಟಿವಿ ಭದ್ರತೆಯನ್ನು ಸಹ ಕಲ್ಪಿಸಲಾಗಿದೆ.
ಉಪ ಚುನಾವಣೆ ಮತಎಣಿಕೆ ನವೆಂಬರ್ 23ರಂದು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನವೆಂಬರ್ 22ರ ಸಂಜೆ 6 ಗಂಟೆಯಿಂದ ನವೆಂಬರ್ 24ರ ಬೆಳಗ್ಗೆ 6 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಕಲಂ 163 ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ.
ಮತದಾನದ ಮಾಹಿತಿ: ನವೆಂಬರ್ 13ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇ. 9.07 ರಷ್ಟು, 11 ಗಂಟೆವರೆಗೆ ಶೇ 26.96 ರಷ್ಟು, ಮಧ್ಯಾಹ್ನ 1 ಗಂಟೆವರೆಗೆ ಶೇ 43.46 ರಷ್ಟು, ಮಧ್ಯಾಹ್ನ 3 ಗಂಟೆವರೆಗೆ ಶೇ 58.10 ರಷ್ಟು, ಸಂಜೆ 5 ಗಂಟೆವರೆಗೆ 71.47 ರಷ್ಟು ಹಾಗೂ ಮತದಾನ ಅವಧಿ ಮುಕ್ತಾಯನಂತರ ಅಂತಿಮವಾಗಿ ಶೇ 76.24ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ.
ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 2,36,402 ಮತದಾರರಿದ್ದು, ಅದರಲ್ಲಿ 1,80,189 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. 1,17,935 ಪುರುಷ ಮತದಾರರಲ್ಲಿ 90,922 ಪುರುಷರು ಮತ ಚಲಾಯಿಸಿದ್ದಾರೆ. 1,18,438 ಮಹಿಳಾ ಮತದಾರರಲ್ಲಿ 89,252 ಮಹಿಳೆಯರು ಮತದಾನ ಮಾಡಿದ್ದಾರೆ ಮತ್ತು 29 ಇತರೆ ಮತದಾರರ ಪೈಕಿ 12 ಮಂದಿ ಮತದಾನ ಮಾಡಿದ್ದಾರೆ.
ಉಪ ಚುನಾವಣೆ ಕಣದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯದ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಈ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರ ಹನುಮಂತ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಕರ್ನಾಟಕ ಜನತಾ ಪಕ್ಷದ ಅಂಜಿನಪ್ಪ. ಎನ್, ಪಕ್ಷೇತರ ಅಭ್ಯರ್ಥಿಗಳಾದ ಟಿ. ಎಂ. ಮಾರುತಿ, ಟಿ. ಎರ್ರಿಸ್ವಾಮಿ, ಎನ್. ವೆಂಕಣ್ಣ ಸಂಡೂರು ಕಣದಲ್ಲಿದ್ದಾರೆ. ಯಾರಿಗೆ ಗೆಲುವು? ಎಂದು ಕಾದು ನೋಡಬೇಕಿದೆ.












Click it and Unblock the Notifications