ಹೊಸಪೇಟೆಯಲ್ಲಿ ಮಳೆ ಅವಾಂತರ; ನಿರಾಶ್ರಿತರಿಗೆ ಪರಿಹಾರ ವಿತರಿಸಿದ ಶಶಿಕಲಾ ಜೊಲ್ಲೆ
ಬಳ್ಳಾರಿ, ಸೆಪ್ಟೆಂಬರ್, 02: ಇತ್ತೀಚೆಗೆ ಸುರಿದ ಮಳೆಯಿಂದ ವಿಜಯನಗರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಮಳೆ ಹಾನಿಗೀಡಾಗಿದ್ದ ಹೊಸಪೇಟೆಯ ಇಂದಿರಾನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಹಾರವಾಗಿ 10ಸಾವಿರ ರೂ. ಚೆಕ್ ವಿತರಣೆ
ಮೊದಲಿಗೆ ಹೊಸಪೇಟೆಯ 15ನೇ ವಾರ್ಡ್ ವ್ಯಾಪ್ತಿಯ ಇಂದಿರಾನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇತ್ತೀಚಿಗೆ ಸುರಿದ ಮಳೆಯಿಂದಾಗಿ ರಾಜಕಾಲುವೆಗಳು ಉಕ್ಕಿ ಹರಿದಿದ್ದವು. ಮಳೆ ನೀರು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಹಾನಿಗೀಡಾದ ಪ್ರದೇಶಗಳನ್ನು ಶಶಿಕಲಾ ಜೊಲ್ಲೆ ಅವರು ಪರಿಶೀಲಿಸಿದರು. ಇಂದಿರಾನಗರ ಬಡಾವಣೆಯಲ್ಲಿ ಹಾನಿಗೊಳಗಾದ 64 ಮನೆಗಳ ಮಾಲೀಕರಿಗೆ ತುರ್ತು ಪರಿಹಾರವಾಗಿ ತಲಾ 10ಸಾವಿರ ರೂಪಾಯಿಗಳ ಚೆಕ್ ಅನ್ನು ವಿತರಿಸಿದ್ದು, ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.
ಮಳೆಹಾನಿ ಪ್ರದೇಶಕ್ಕೆ ಜೊಲ್ಲೆ ಭೇಟಿ
ಈ ರಾಜಕಾಲುವೆಯ ಸುತ್ತಮುತ್ತ ವಾಸವಾಗಿರುವವರೆಲ್ಲರೂ ಸಮ್ಮತಿಸಿದಲ್ಲಿ ತಮಗೆ ಹೊಸಪೇಟೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒಳಗೊಂಡ ಆಶ್ರಯ ಬಡಾವಣೆಯೊಂದನ್ನು ನಿರ್ಮಿಸಿಕೊಡುತ್ತೇನೆ. ಅಲ್ಲಿಗೆ ನಿರಾಶ್ರಿತರನ್ನು ಹಸ್ತಾಂತರಿಸಲಾಗುವುದು. ಇಲ್ಲಿಯೇ ಇರಲು ನೀವು ತಿರ್ಮಾನಿಸಿದರೆ ನಿಯಮಾನುಸಾರ ಪರಿಹಾರವನ್ನು ವಿತರಿಸಲಾಗುವುದು. ಹಾಗೂ ಇದನ್ನು ಸ್ಲಂ ಪ್ರದೇಶವನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಬಡಾವಣೆಯ ಜನರು ಚರ್ಚಿಸಿ ಒಮ್ಮತದ ನಿರ್ಧಾರ ತಿಳಿಸಿದರೆ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.

ನಂತರ ಗಾಂಧಿನಗರ ಬಡಾವಣೆಗೂ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಮರಿಯಮ್ಮನಹಳ್ಳಿ ಸಮೀಪದ ಡಣನಾಯಕನಕೆರೆ ಬಿದ್ದಿದ್ದು, ಸುಮಾರು 120 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಆಗಿತ್ತು. ಈ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಬೆಳೆ ಹಾನಿ ಆಗಿರುವ ಪ್ರದೇಶವನ್ನು ಪರಿಶೀಲಿಸಿದ ಸಚಿವೆ, ಸ್ಥಳದಲ್ಲಿದ್ದ ರೈತರ ಅಹವಾಲುಗಳನ್ನು ಆಲಿಸಿದರು. ಮತ್ತು ಸರ್ಕಾರ ನಿಮ್ಮೊಂದಿಗೆ ಇದೆ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಶಿಕಲಾ ಜೊಲ್ಲೆ ಅವರು ಡಣನಾಯಕನಕೆರೆ ಕೆರೆಯನ್ನು ವೀಕ್ಷಿಸಿದ್ದು, ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸನ್ಮಾನಿಸಿದರು. ಮತ್ತು ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ನಂತರ ಅವರು ಮಳೆಯಿಂದ ಹಾನಿಗೊಳಗಾಗಿದ್ದ ರಸ್ತೆ, ಮರಿಯಮ್ಮನಹಳ್ಳಿ ಬಳಿ ನಡೆಯುತ್ತಿರುವ ಪಾವಗಡ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯತಿ ಸಿಇಒ ಹರ್ಷಲ್ ಭೋಯರ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಮಾಜಿ ಶಾಸಕ ನೇಮಿರಾಜ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲೂ ಭಾರಿ ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡಿದ್ದರು. ಪಾದಚಾರಿಗಳು ಕೂಡ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಟ್ಟಿದ್ದಾರೆ. ರಸ್ತೆಗಳಲ್ಲಿ ತಗ್ಗುಗಳು ಬಿದ್ದಿರುವುದದಿಂದ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇನ್ನು ಮಳೆ ನೀರು ನೇರವಾಗಿ ಮನೆಗಳಿಗೆ ನುಗ್ಗಿದ ಪರಿಣಾಮ ಮನೆಯಲ್ಲಿನ ನೀರನ್ನು ಹೊರಗಡೆ ತೆಗೆದು ಹಾಕಲು ಜನರು ಹರಸಾಹಸವನ್ನೇ ಪಟ್ಟಿದ್ದಾರೆ. ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೆ ರಸ್ತೆಗಳ ದುಸ್ಥಿತಿ ಎದ್ದು ಕಾಣುತ್ತದೆ.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ರಸ್ತೆಗಳು ತುಂಬಾ ಹದೆಗಟ್ಟಿವೆ. ನಿರಂತರ ಮಳೆ ಮತ್ತು ಕಳೆಪ ಕಾಮಗಾರಿಯಿಂದ ರಸ್ತೆಗಳು ಹಳ್ಳ ಹಿಡಿದಿವೆ. ಕೆಲವೆಡೆ ತಗ್ಗು ಗುಂಡಿಗಳಿಂದ ಅಪಘಾತವಾಗಿ ಮೃತಪಟ್ಟ ಘಟನೆಗಳೂ ನಡೆದಿವೆ. ಕಾರು, ಆಟೋಗಳು ಸೇರಿದಂತೆ ಸಣ್ಣ ವಾಹನಗಳು ಇಲ್ಲಿನ ರಸ್ತೆಗಳಲ್ಲಿ ಚಲಿಸುವುದು ಕಷ್ಟಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಸಂಪೂರ್ಣ ಜಲಾವೃತ ಆಗಿದ್ದವು. ಹೊಸಪೇಟೆಯಲ್ಲಿಯೂ ವರುಣ ಆರ್ಭಟಿಸಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆ ಹಾನಿಗೋಡಾದ ಪ್ರದೇಶಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿದ್ದು, ಹಾನಿಗೊಳಗಾದವರಿಗೆ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.











Click it and Unblock the Notifications