ಮೊಬೈಲ್ ಮೂಲಕ ಬಳ್ಳಾರಿ ಕಂಪನಿಯಿಂದ 2 ಕೋಟಿ ದೋಚಿದ 23ರ ಯುವಕ!
ಬಳ್ಳಾರಿ, ಸೆಪ್ಟೆಂಬರ್ 19: ವಿವೋ ಕಂಪನಿಯ ಮೊಬೈಲ್ ಮೂಲಕ 23 ವರ್ಷದ ಯುವಕನೊಬ್ಬ ಬಳ್ಳಾರಿಯ ಕಂಪನಿಗೆ ಪಂಗನಾಮ ಹಾಕಿದ್ದ. ಈ ಸೈಬರ್ ಕ್ರೈಂನ ತನಿಖೆ ಕೈಗೊಂಡ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ದೊಡ್ಡ ಕಂಪನಿಯಿಂದ ಯುವಕ ತನ್ನ ಖಾತೆಗೆ ಹಾಕಿಸಿಕೊಂಡಿದ್ದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೂರದಲ್ಲಿ ಕುಳಿತು ಕಂಪನಿ ಯಾಮಾರಿಸಿದ ಯುವಕನ ತಂತ್ರವನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ.
ಬಳ್ಳಾರಿಯ ಎಸ್‌ಪಿ ಶೋಭಾರಾಣಿ ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ, ಬಳ್ಳಾರಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ರೂ. 1,21,04,500 ಹಣ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ್ದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಳ್ಳಾರಿ ಮೂಲದ ಕಂಪನಿಯಿಂದ ವರ್ಗಾವಣೆಯಾದ ಹಣ ಮಾತ್ರವಲ್ಲ. ಆರೋಪಿಯ ಬೇರೆ-ಬೇರೆ ಖಾತೆಗಳಲ್ಲಿದ್ದ ರೂ. 27,97,582 ಹಣವನ್ನು ಸಹ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಎಸ್‌ಪಿ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ನಕಲಿ ಇ-ಮೇಲ್ ಮೂಲಕ ವಂಚನೆ: ಈ ಸೈಬರ್ ಕ್ರೈಂ ನಡೆದಿರುವುದು ನಕಲಿ ಇ-ಮೇಲ್ ಮೂಲಕ. ದಿನಾಂಕ 3/9/2024ರಂದು ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಬಳ್ಳಾರಿ ನಗರದ ಹಿಂದೂಸ್ತಾನ್ ಮೆಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಅಗರ್‌ವಾಲ್ ಕೋಲ್ ಕಾರ್ಪೊರೇಷನ್ ಪ್ರೈ. ಲಿಮಿಟೆಡ್ ಕಂಪನಿಯಿಂದ ಕಲ್ಲಿದ್ದಲು ಖರೀದಿ ಮಾಡುತ್ತಿದ್ದರು.
ಕಂಪನಿ ಅವರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಈ ಮಾಹಿತಿಯನ್ನು ಮಧ್ಯಪ್ರದೇಶದ 23 ವರ್ಷದ ಯುವಕ ಅಜಯ್ ಕುಮಾರ್ ಜೈಸ್ವಾಲ್ ತಿಳಿದಿದ್ದ. ಆರೋಪಿ ಅಗರ್‌ವಾಲ್ ಕೋಲ್ ಕಾರ್ಪೊರೇಷನ್ ಪ್ರೈ. ಲಿಮಿಟೆಡ್ ಕಂಪನಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಸಿದ್ಧಪಡಿಸಿದ.
ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆ ಆಗಿದೆ ಎಂದು ನಕಲಿ ಇ- ಮೇಲ್ ಐಡಿ ಮೂಲಕ ತನ್ನ ಮಧ್ಯಪ್ರದೇಶ ರಾಜ್ಯದ ಇಂಡಸ್ ಲ್ಯಾಂಡ್ ಖಾತೆ ಸಂಖ್ಯೆಯನ್ನು ಕಳುಹಿಸಿ ಹಣ ಹಾಕಲು ತಿಳಿಸಿದ್ದ. ಈ ಮೂಲಕ ಆನ್‌ಲೈನ್ ಮೂಲಕವೇ ವಂಚನೆ ಮಾಡಿ, ತನ್ನ ಬ್ಯಾಂಕ್ ಖಾತೆಗೆ 2,11,50,224 ರೂ. ಹಾಕಿಸಿಕೊಂಡು ಕಂಪನಿಗೆ ಮೋಸ ಮತ್ತು ವಂಚನೆ ಮಾಡಿದ್ದ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಳ್ಳಾರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿಎಸ್‌ಪಿ ಡಾ. ಸಂತೋಷ ಚವ್ಹಾಣ್ ನೇತೃತ್ವದ ತಂಡ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ರಮಾಕಾಂತ್. ವೈ. ಹೆಚ್. ಮತ್ತು ಸಿಬ್ಬಂದಿಗಳಾದ ಎಎಸ್‌ಐ ಎಂ. ಜಿ. ತಿಪ್ಪೇರುದ್ರಪ್ಪ, ಹನುಮಂತ ರೆಡ್ಡಿ, ಯಲ್ಲೇಶಿ, ವೆಂಕಟೇಶ್ ಮಧ್ಯಪ್ರದೇಶ ರಾಜ್ಯಕ್ಕೆ ತೆರಳಿ ತನಿಖೆ ಕೈಗೊಂಡರು, ತಾಂತ್ರಿಕ ಮಾಹಿತಿ ಸಹಾಯದೊಂದಿಗೆ ಸಾಕ್ಷ್ಯಧಾರ ಸಂಗ್ರಹಿಸಿ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಬಂಧಿಸಿದರು.
ಆರೋಪಿಯಿಂದ ಹಿಂದೂಸ್ತಾನ್ ಮೆಟಲ್ ಪ್ರೈ. ಲಿಮಿಟೆಡ್‌ಗೆ ವಂಚಿಸಿದ. ನಗದು ಹಣ ರೂ. 1,21,04,500 ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿತನ ಬೇರೆ-ಬೇರೆ ಖಾತೆಗಳಲ್ಲಿದ್ದ ರೂ. 27,97,582 ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿ, ಒಟ್ಟು 1,49,02,082 ರೂ. ಹಣವನ್ನು ಹಾಗೂ ಆರೋಪಿ ವಂಚನೆಗೆ ಉಪಯೋಗಿಸಿದ ಒಂದು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications