PM Modi Speech: ಮೋದಿಗಿಂತ ಹೆಚ್ಚು ಹೊತ್ತು ಭಾಷಣ ಮಾಡಿದ ಅನುವಾದಕ: ಪ್ರಧಾನಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಕರ್ನಾಟಕ ವಿಧಾನಸಭಾ ಚುನಾವಣೆ ಸದ್ಯ ರಂಗೇರಿದೆ, ರಾಷ್ಟ್ರ ಮಟ್ಟದ ನಾಯಕರು ರಾಜ್ಯದಲ್ಲಿ ಠಿಕಾಣಿ ಹೂಡಿ ಮತಬೇಟೆ ನಡೆಸುತ್ತಿದ್ದಾರೆ. ರಾಷ್ಟ್ರ ಮಟ್ಟದ ನಾಯಕರು ತಮ್ಮ ಅನುವಾದವನ್ನು ಜನಸಾಮಾನ್ಯರಿಗೆ ತಲುಪಿಸಲು ಅನುವಾದಕರ ಮೊರೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಕ್ಕೆ ಭಾರಿ ಪ್ರಸಿದ್ಧವಾಗಿದ್ದಾರೆ, ಆದರೆ ಅವರಿಗಿಂತ ಅನುವಾದಕರೇ ಹೆಚ್ಚು ಹೊತ್ತು ಭಾಷಣ ಮಾಡಿದರೆ ಹೇಗಿರುತ್ತದೆ?
ಹೌದು, ಇಂತಹದ್ದೊಂದು ಪ್ರಸಂಗ ಹೊಸಪೇಟೆಯಲ್ಲಿ ನಡೆದಿದೆ. ಪ್ರಧಾನಿ ಮೋದಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು, ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಹಂಪಿ ಶ್ರೀ ವಿರೂಪಾಕ್ಷ ಸ್ವಾಮಿ, ಉಗ್ರನರಸಿಂಹ ಸ್ವಾಮಿ, ಹುಲಿಗೆಮ್ಮ ದೇವಿಗೆ ನಮಸ್ಕರಿಸಿದರು. ಹನುಮಜನ್ಮ ಭೂಮಿಗೆ ಆಗಮಿಸಿದ್ದು ನನ್ನ ಪುಣ್ಯ ಎಂದರು.

ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ನವರು ಹನುಮನನ್ನು ಕೂಡಿ ಹಾಕಲು ಹೊರಟಿದೆ, ಕಾಂಗ್ರೆಸ್‌ನವರು ಹನುಮ ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಟೀಕಾಪ್ರಹಾರ ಮಾಡಿದರು. ಮೋದಿ ಕೆಲ ಹೊತ್ತು ಮಾತನಾಡಿದ್ದನ್ನು ಅನುವಾದಕ ಕನ್ನಡದಲ್ಲಿ ಹೇಳಲು ಆರಂಭಿಸಿದರು.
ಅವರು ಹಿಂದಿಯಲ್ಲಿ ಮಾತನಾಡಿದ್ದನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದವರು, ಮೋದಿ ಧಾಟಿಯಲ್ಲೇ ಭಾಷಣ ಮಾಡಲು ಆರಂಭಿಸಿದರು. ಈಗ ಮುಗಿಸುತ್ತಾರೆ, ಆಗ ಮುಗಿಸುತ್ತಾರೆ ಎಂದು ಪ್ರಧಾನಿ ಮೋದಿ ಕೂಡ ಸಾಕಷ್ಟು ಸಮಯ ಕಾದರು, ಆದರೆ, ಅನುವಾದಕ ಮಾತ್ರ ತಮ್ಮ ಭಾಷಣದಲ್ಲಿ ಸಂರ್ಪೂವಾಗಿ ನಿರತರಾಗಿದ್ದರು. ಸುಮಾರು 2 ನಿಮಿಷ 20 ಸೆಕೆಂಡ್‌ಗಳ ಕಾಲ ಮೋದಿ ತಮ್ಮ ಭಾಷಣ ಮುಂದುವರೆಸಲು ಕಾದು ನಿಂತರು.
ಪ್ರಧಾನಿ ನರೇಂದ್ರ ಮೋದಿಗೆ ಭಾಷಣ ಮಾಡಲು ಬಿಡದ ಅನುವಾದಕ..😅🙏#NarendraModi pic.twitter.com/LxIamjYlWh
— DEEPU GOWDRU (@DEEPUVAJRAMUNI) May 2, 2023
ತಮ್ಮ ಭಾಷಣಕ್ಕೆ ಅನುವಾದಕನೇ ಅಡ್ಡವಾಗಿದ್ದಾರೆ ಎನ್ನುವಂತೆ ಅವರು ಸಿಟ್ಟಾಗಿದ್ದು ಕಂಡು ಬಂತು, ಕೊನೆಗೂ ಅನುವಾದಕ ಭಾಷಣದ ಅನುವಾದವನ್ನ ಮುಗಿಸಿದ ಬಳಿಕ ಮೋದಿ ತಮ್ಮ ಭಾಷಣ ಮುಂದುವರೆಸಿದರು. ಒಟ್ಟಾರೆ ಅನುವಾದಕರ ಅತಿ ಉತ್ಸಾಹದಿಂದ ಮೋದಿ ಇರಿಸು ಮುರುಸಿಗೆ ಒಳಗಾದರು.
ಅಂದಹಾಗೆ ಮೋದಿ ಭಾಷಣವನ್ನು ಅನುವಾದ ಮಾಡುತ್ತಿದ್ದದ್ದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್. ಇವರು, ಮೂರು ಬಾರಿ ಬಿಜೆಪಿಯಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದರು. ಆದರೆ ಕಳೆದ ವರ್ಷ ಇವರಿಗೆ ಎಂಎಲ್‌ಸಿ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರಿಗೆ ಟಿಕೆಟ್ ಕೈತಪ್ಪು ಬಿಎಲ್ ಸಂತೋಷ್ ಕಾರಣ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಾರಿ ಚುನಾವಣೆಯಲ್ಲಿ ಅವರು ರಾಜ್ಯದಲ್ಲಿ ಮೋದಿ ಭಾಷಣದ ಅನುವಾದಕರಾಗಿದ್ದಾರೆ.












Click it and Unblock the Notifications