ಬಳ್ಳಾರಿಯ ತುಂಗಭದ್ರಾ ಜಲಾಶಯ ಭರ್ತಿ, ನೀರು ಬಿಡುಗಡೆ
ಬಳ್ಳಾರಿ, ಜುಲೈ 18 : ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಬುಧವಾರ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯ ಜೀವನಾಡಿ. 1633 ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ ಬುಧವಾರ 1630 ಅಡಿಗೆ ತಲುಪಿದೆ. ಆದ್ದರಿಂದ, ನದಿಗೆ ನೀರು ಹರಿಸಲಾಗಿದೆ.
ತುಂಗಭದ್ರಾ ಮಂಡಳಿಯ ಮುಖ್ಯ ಇಂಜಿನಿಯರ್ ರಂಗಾರೆಡ್ಡಿ ಅವರು ಜಲಾಶಯಕ್ಕೆ ಬಾಗಿನ ಸಮರ್ಪಿಸಿ, ಜಲಾಶಯದ 12 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸುವುದಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬುಧವಾರ ರಾತ್ರಿಯಿಂದ 30 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಪಂ ಇಒಗಳು ಜನರಿಗೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ವಿಶೇಷವಾಗಿ ಹೊಸಪೇಟೆ, ಕಂಪ್ಲಿ ಹಾಗೂ ಸಿರಗುಪ್ಪ ತಾಲೂಕುಗಳ ನದಿ ಪಾತ್ರದಲ್ಲಿ ಪ್ರವಾಹದಿಂದಾಗುವ ಹಾನಿ ತಡೆಯಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.













Click it and Unblock the Notifications