Mylara Lingeshwara Karnika: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ದೇವಸ್ಥಾನದ ಧರ್ಮದರ್ಶಿ ಅಪಸ್ವರ!
ವಿಜಯನಗರ ಫೆಬ್ರವರಿ 27: 'ಮಳೆ ಬೆಳೆ ಎಲ್ಲಾ ಸಂಪಾಗುತ್ತದೆ. ರೈತರಿಗೆ ಈ ಬಾರಿ ಒಳ್ಳೆಯದಾಗುತ್ತದೆ' ಇದು ಈ ವರ್ಷ ಭರವಸೆ ಹುಟ್ಟಿಸುವ ಮೈಲಾರ ಲಿಂಗೇಶ್ವರ ಕಾರ್ಣಿಕ. ಇದು ಬರಗಾಲದಿಂದ ತತ್ತರಿಸಿದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಈ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ ಎಂದು ದೇವಸ್ಥಾನದ ಧರ್ಮದರ್ಶಿ ಅಪಸ್ವರ ನುಡಿದಿದ್ದಾರೆ.
ಹೌದು... ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಈ ವರ್ಷದ ದೈವವಾಣಿಯನ್ನು ರಾಮಪ್ಪ ಗೋರವಯ್ಯ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ನುಡಿಯುವ ಕಾರ್ಣಿಕವನ್ನು ರಾಜ್ಯದ ಮುನ್ನುಡಿ ಎಂದೇ ಭಾವಿಸಲಾಗುತ್ತದೆ. 2024ನೇ ಸಾಲಿನಲ್ಲಿ ನಡೆದ ಜಾತ್ರೆಯ ವೇಳೆ ಮೈಲಾರಲಿಂಗೆಶ್ವರ ದೇವರ ಗೊರವಯ್ಯ 'ಸಂಪಾಯಿತಲೇ ಪರಾಕ್' ಎಂಬ ಕಾರ್ಣಿಕವನ್ನು ನುಡಿದಿದ್ದಾರೆ.

ಮೈಲಾರದ ಡಂಗನಮರಡಿಯಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವನ್ನು ಸೋಮವಾರ ಸಂಜೆ ನುಡೆಸಯಲಾಗಿದೆ. 18 ಎತ್ತರದ ಅಡಿ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಮದು ಹೇಳಿದೊಡನೇ ಎಲ್ಲರೂ ಶಾಂತವಾಗಿದ್ದರು. ಮರು ಕ್ಷಣವೇ 'ಸಂಪಾಯಿತಲೇ ಪರಾಕ್' ಎಂದು ಕಾರ್ಣಿಕವನ್ನು ನುಡಿದು ಅಲ್ಲಿಂದ ಬಿದ್ದಿದ್ದಾರೆ. ಈ ಕಾರ್ಣಿಕವನ್ನು ರಾಜ್ಯದ ಒಂದು ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತದೆ. ಆದರೆ ಈ ಬಾರಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನವಾಣಿ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಓಡೆಯರ್ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಸತ್ಯವಾಗುವುದಿಲ್ಲ ಎಂದಿದ್ದಾರೆ. ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಕಾರ್ಣಿಕ ನುಡಿ ನುಡಿದ್ದಾರೆ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು ಎಂದು ಧೃ್ಮದರ್ಶಿ ವೆಂಕಪ್ಪಯ್ಯ ಹೇಳಿದ್ದಾರೆ. ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲ್ಲಿಕ್ಕೆ ಸಾಧ್ಯ. ಯಾರ ಅಣತಿಯಂತೆ ಕಾರ್ಣಿಕ ನುಡಿಯುತ್ತಿದ್ದಾರೆ ಗೊತ್ತಿಲ್ಲ. ಮೈಲಾರಲಿಂಗೇಶ್ವರ ದೇವರು ಹುಟ್ಟಿದಾಗಿನಿಂದ ನಡೆದಿದ್ದ ಧಾರ್ಮಿಕ ಕಾರ್ಯಗಳು ಈಗ ನಡೆದಿಲ್ಲ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಈ ವರ್ಷ ಮಳೆ-ಬೆಳೆ ಸಮೃದ್ಧವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬರಗಾಲದಿಂದ ರೈತರು ಕಂಗೆಟ್ಟ ಹಿನ್ನೆಲೆಯಲ್ಲಿ ಕಾರ್ಣಿಕವು ರೈತ ಸಮುದಾಯಕ್ಕೆ ತುಸು ಸಂತಸ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾಗಲಿದೆ ಎಂಬ ಸಂದೇಶ ನೀಡಲಾಗಿದೆ. ಇನ್ನು ರಾಜಕೀಯ ಬಗ್ಗೆ ಯಾವುದೇ ವಿಶ್ಲೇಷಣೆಯನ್ನು ಮಾಡಲಾಗಿಲ್ಲ.
ಕಾರ್ಣಿಕದ ಗೋರವಪ್ಪ ರಾಮಪ್ಪ ಅವರು ಹನ್ನೊಂದು ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಂತರ ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ. ಹದಿನೈದು ಅಡಿಯ ಬಿಲ್ಲನ್ನು ಏರಿ ಸದ್ದಲ್ಲೇ ಎಂದು ಕೂಗಿದಾಗ ಎಷ್ಟೇ ಭಕ್ತರು ಸೇರಿದ್ದರೂ ಕೂಡ ಆ ಸ್ಥಳ ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ನಿಶ್ಯಬ್ಧವಾಗುತ್ತದೆ.
ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಣಿಕ ನುಡಿಯನ್ನು ಧರ್ಮದರ್ಶಿ ವೆಂಕಟಪ್ಪಯ್ಯ ಸತ್ಯವಾಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಗೊರವಯ್ಯ ರಾಮಪ್ಪ ವಿರುದ್ಧ ಮತ್ತೆ ಧರ್ಮದರ್ಶಿ ವೆಂಕಪ್ಪಯ್ಯ ತಿರುಗಿಬಿದ್ದಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿ ವರ್ಷವೂ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಉಂಟಾಗುತ್ತದೆ ಎಂದಿದ್ದಾರೆ.












Click it and Unblock the Notifications