ಬಳ್ಳಾರಿ: ಸ್ನೇಹಿತನನ್ನೇ ಕೊಲೆಗೈದ ಪಾಪಿಗಳು, ಘಟನೆ ಹಿನ್ನೆಲೆ ನೋಡಿದ್ರೆ ಶಾಕ್ ಆಗೋದಂತೂ ಗ್ಯಾರಂಟಿ!
ಬಳ್ಳಾರಿ, ಜೂನ್, 30: ಬಕ್ರೀದ್ ಹಿನ್ನೆಲೆ ಪಾರ್ಟಿ ಮಾಡುವಾಗ ಗಲಾಟೆ ಸಂಭವಿಸಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಸೂರಿ ಕಾಲೊನಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಇನ್ನು ಸ್ನೇಹಿತರ ನಡುವಿನ ವಾಗ್ವಾದವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆಯಾದ ಯುವಕ ಬಳ್ಳಾರಿಯ ನೇತಾಜಿ ನಗರದ ಲಿಯಾಖತ್ ಅಲಿಯಾಸ್ ರೋಷನ್ (24) ಆಗಿದ್ದಾರೆ. ಇವನು ಕಲಬುರಗಿಯಲ್ಲಿ ಅರೇಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದು, ಬಕ್ರೀದ್ ಹಿನ್ನಲೆಯಲ್ಲಿ ಬುಧವಾರ ಸಂಜೆ ಬಳ್ಳಾರಿಗೆ ಆಗಮಿಸಿದ್ದ.

ಈತ ಬಕ್ರೀದ್ ಹಿನ್ನೆಲೆ ಸಂಜೆ ಸ್ನೇಹಿತರೊಂದಿಗೆ ಈದ್ಗಾ ಮೈದಾನದ ಎದುರುಗಡೆ ಇರುವ ಸೂರಿ ಕಾಲೋನಿಗೆ ಪಾರ್ಟಿ ಮಾಡಲು ಹೋಗಿದ್ದಾನೆ. ಈ ವೇಳೆ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾಕಾಸ್ತ್ರಗಳಿಂದ ಪರಸ್ಪರ ಹೊಡೆದಾಡುವಾಗ ಲಿಯಾಖತ್ ಅಲಿಯಾಸ್ ರೋಷನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ನಟರಾಜ್, ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು ವಿಮ್ಸ್‌ಗೆ ಕಳುಹಿಸಿದ್ದಾರೆ. ಇನ್ನು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಸಂಶಯಾಸ್ಪದ ಯುವಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೊಲೆಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.
ಸದ್ಯ ಈ ಪ್ರಕರಣ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications