ಬಳ್ಳಾರಿ ಅಪಘಾತ ಪ್ರಕರಣ: ರವಿ ಸೋದರತ್ತೆಯಿಂದ ಮತ್ತೊಂದು ಮಾಹಿತಿ
ಬಳ್ಳಾರಿ, ಫೆಬ್ರವರಿ 14: ಬಳ್ಳಾರಿಯ ಹೊಸಪೇಟೆ ಸಮೀಪ ಫೆ.10ರಂದು ನಡೆದ ಕಾರು ಅಪಘಾತ ಎಲ್ಲೆಲ್ಲೂ ಸುದ್ದಿಯಲ್ಲಿದೆ. ಅಪಘಾತದಲ್ಲಿ ಪಾದಚಾರಿ ರವಿ ನಾಯ್ಕ್ ಹಾಗೂ ಕಾರು ಚಾಲಕ ಸಚಿನ್ ಎಂಬುವರು ಮೃತಪಟ್ಟಿದ್ದು, ಸಚಿವ ಆರ್ ಅಶೋಕ್ ಮಗ ಈ ಕಾರಿನಲ್ಲಿದ್ದರಾ ಇಲ್ಲವಾ ಎಂಬುದೇ ಸದ್ಯದ ಚರ್ಚಿತ ವಿಷಯವಾಗಿದೆ.
ಆದರೆ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿರುವ, ರವಿ ನಾಯ್ಕ ಸೋದರತ್ತೆ ಭಾರತಿಯವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಸಚಿವ ಆರ್.ಅಶೋಕ್ ಅವರ ಮಗನನ್ನು ನನ್ನ ಕಣ್ಣಾರೆ ನೋಡಿದ್ದೀನಿ ಎಂದು ಮೃತ ರವಿ ನಾಯ್ಕ್ ಸೋದರತ್ತೆ ಹೇಳಿದ್ದಾರೆ. ಆರ್.ಅಶೋಕ್ ಮಗನ ಫೋಟೋ ತೋರಿಸಿ, ಈ ವ್ಯಕ್ತಿಯನ್ನು ನಾನೇ ಸ್ಟ್ರೆಚರ್ ನಲ್ಲಿ ತಳ್ಳಿಕೊಂಡು ಹೋಗಿದ್ದೇನೆ ಎಂದಿದ್ದಾರೆ.

ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಅವರ ಬಳಿ ಭಾರತಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಐವತ್ತು ಸಾವಿರ ಪರಿಹಾರ ಹಣ ನೀಡಲು ಭೀಮಾ ನಾಯ್ಕ್ ಅವರು ಭೇಟಿ ನೀಡಿದ್ದ ಸಂದರ್ಭ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಹೊಸಪೇಟೆ ತಜ್ಞವೈದ್ಯ ಮಹಂತಪ್ಪ ಅವರೂ ನಿನ್ನೆ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದರು. ಸೋಮವಾರ ಮರಿಯಮ್ಮನಹಳ್ಳಿ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್, ಸಚಿವ ಆರ್ ಅಶೋಕ್ ಅವರ ಸಂಬಂಧಿ ಎಂದು ತಮಗೆ ಮರಿಯಮ್ಮನಹಳ್ಳಿ ಸಬ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿರುವುದಾಗಿ ತಿಳಿಸಿದ್ದರು. ಇದೇ ಕಾರಣಕ್ಕೆ ತಡರಾತ್ರಿ 12ರ ನಂತರ ಪೋಸ್ಟ್ ಮಾರ್ಟಮ್ ಮಾಡಿ ಶವ ಕೊಡಲಾಯಿತು ಎಂದೂ ಮಾಹಿತಿಯನ್ನು ನೀಡಿದ್ದರು.











Click it and Unblock the Notifications