ಸೋಲು, ಗೆಲುವನ್ನು ಜನರು ನಿರ್ಧರಿಸುತ್ತಾರೆ: ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ,ನವೆಂಬರ್ 12: ಬಿಜೆಪಿ ಮುಖಂಡ ರಾಮಲಿಂಗಪ್ಪ ದೊಡ್ಡವರು. ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿಗೆ ಟಿಕೆಟ್ ನೀಡಿದರೆ ಗೆಲವು ಕಷ್ಟ ಎನ್ನುವ ಬಿಜೆಪಿ ಮುಖಂಡ ರಾಮಲಿಂಗಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಪರ್ಧೆಯಲ್ಲಿ ಸೋಲು ಗೆಲುವು ನಾಣ್ಯದ ಎರಡು ಮುಖಗಳು. ಗುರುವಾರ ನಡೆದ ಕ್ರಿಕೆಟ್‌ನಲ್ಲಿ ಭಾರತದ ತಂಡ ಸೋತಿತು. ಹಾಗಂತ ತಂಡವನ್ನೇ ಬಿಡಲಾದೀತೆ..? ಎಂದು ಪ್ರಶ್ನಿಸಿದ್ದಾರೆ.
ಇದೇ ನ.20ರಂದು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ಎಸ್‌ಟಿ ವಿರಾಟ್ ಸಮಾವೇಶದ ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೋಲು ಹಾಗೂ ಗೆಲುವನ್ನು ಜನರು ನಿರ್ಧರಿಸುತ್ತಾರೆ. ಒಬ್ಬರು ಅಸಮಾಧಾನ ಹೊರ ಹಾಕಿದ ಮಾತ್ರಕ್ಕೆ ಇಡೀ ಪಕ್ಷದ ಕಾರ್ಯಕರ್ತರ ಅಸಮಾಧಾನ ಎನ್ನಲಾಗದು. ರಾಮಲಿಂಗಪ್ಪ ನಮ್ಮಿಂದ ಸಹಾಯ ಪಡೆದಿದ್ದಾರೆ. ಆ ಬಗ್ಗೆ ಅವರನ್ನು ಕೇಳಬೇಕು ಎಂದರು.

ಪಕ್ಷದ ಕಟ್ಟ ಕಡೆಯ ಸಾಮಾನ್ಯ ಕಾರ್ಯಕರ್ತನಿಗೂ ಕರೆ ಮೂಲಕ ಆಹ್ವಾನ
ಎಸ್‌ಟಿ ವಿರಾಟ್ ಸಮಾವೇಶದ ಕುರಿತು ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ನಮ್ಮಲ್ಲಿ ಈಗಾಗಲೇ ಲಭ್ಯವಿರುವ ಫೋನ್ ನಂಬರ್‌ಗಳ ಪಟ್ಟಿಯನ್ನು ಆಧರಿಸಿ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಎಲ್ಲರಿಗೂ ಎಸ್‌ಟಿ ವಿರಾಟ್ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲು ಕಾರ್ಯ ಇಂದಿನಿಂದ ಮಾಡಲಿದ್ದಾರೆ. ವಿರಾಟ್ ಸಮಾವೇಶಕ್ಕಾಗಿ ರಚಿಸಿರುವ ಕಾಲ್ ಸೆಂಟರ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಸಮುದಾಯದ ಹಾಗೂ ಪಕ್ಷದ ಕಟ್ಟ ಕಡೆಯ ಸಾಮಾನ್ಯ ಕಾರ್ಯಕರ್ತನಿಗೂ ಕೂಡ ಈ ಕಾಲ್‌ಸೆಂಟರ್‌ನಿಂದ ಕಾಲ್ ಮಾಡಿ ಸಮಾವೇಶಕ್ಕೆ ಆಹ್ವಾನ ನೀಡಲಾಗುವುದು. ಅಂದಾಜು 50 ಜನರು ಕಾಲ್‌ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಜನರಿಗೆ ವಿಶೇಷವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಈ ಮೂವರನ್ನು ಆಹ್ವಾನ ಮಾಡಿದ್ದೇವೆ. ಮೂವರಲ್ಲಿ ಒಬ್ಬರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದ ಸಿದ್ಧತೆಗಳು ಭರದಿಂದ ಸಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂದೇಶದ ಮೇರೆಗೆ, ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ಸಮಾವೇಶ ನಡೆಯುತ್ತದೆ ಎಂದು ಹೇಳಿದರು.

ರೆಡ್ಡಿ ಬಿಟ್ಟು ಬೇರೆ ಸಮುದಾಯಕ್ಕೆ ಟಿಕೆಟ್ ಕೊಡುವಂತೆ ಆಗ್ರಹ
ಮುಂದಿನ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದಿಲ್ಲ. ಬೇರೆ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಒಂದು ಕುಟುಂಬಕ್ಕೆ ಅಧಿಕಾರವನ್ನು ಇಷ್ಟು ಪ್ರಮಾಣದಲ್ಲಿ ನೀಡಬಾರದು.ಒಂದೇ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ಬೇಡ. ಸೋಮಶೇಖರ ರೆಡ್ಡಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಕಷ್ಟ ಆಗುತ್ತದೆ. ನಗರದಲ್ಲಿ ಲಿಂಗಾಯತ, ಬಲಿಜ, ಕುರುಬ ಸೇರಿದಂತೆ ಸಾಕಷ್ಟು ಸಮಾಜಗಳು ಇವೆ. ಇಂತಹ ಸಮಾಜದವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡ ರಾಮಲಿಂಗಪ್ಪ ಪಕ್ಷಕ್ಕೆ ಆಗ್ರಹಿಸಿದ್ದರು.

ಪಕ್ಷದಿಂದ ಎರಡು ಪಟ್ಟು ಲಾಭ ಪಡೆದಿದ್ದಾರೆ
ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ವರ್ತನೆ ವರ್ತನೆ ಮತ್ತು ಮಾತುಗಳಿಂದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ನೋವಾಗಿದೆ. ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌ಗಿಂತ ಬಿಜೆಪಿಯಿಂದ ಕಿರುಕುಳ ಇದೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. 2008ರಲ್ಲಿ ರೆಡ್ಡಿ ಸೋದರರಿಂದ ಬಿಜೆಪಿ ಅಧಿಕಾರಕ್ಕೆ ಬಂದಿರಬಹುದು. ಆದರೆ ಬಿಜೆಪಿ ಋಣ ತೀರಿಸಲು ರೆಡ್ಡಿ ಸಹೋದರರು ಎಷ್ಟು ಕೆಲಸ ಮಾಡಿದರೂ ಸಾಲದು. ಬಿಜೆಪಿಗೆ ಎಷ್ಟು ಲಾಭವಾಗಿದೆಯೋ ಅದರ ಎರಡರಷ್ಟು ಲಾಭ ಪಕ್ಷದಿಂದ ಇವರ ಕುಟುಂಬಕ್ಕೆ ಆಗಿದೆ ಎಂದು ರೆಡ್ಡಿ ಸಹೋದದರ ವಿರುದ್ಧ ರಾಮಲಿಂಗಪ್ಪ ಕಿಡಿಕಾರಿದ್ದರು.

ಬುಡಾ ಅಧ್ಯಕ್ಷ ಸ್ಥಾನ ನೀಡಿ ಕಿತ್ತುಕೊಂಡ ಬಗ್ಗೆ ಕಿಡಿ
ಇನ್ನು ಶಾಸಕ ಸೋಮಶೇಖರ್ ರೆಡ್ಡಿ ಮೇಲೆ ಗಂಭೀರ ಆರೋಪ ಮಾಡಿದ್ದ ಅವರು, ಬುಡಾ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ನನಗೆ ಅವಕಾಶ ನೀಡಿತ್ತು. ನಾನು ಒಂದೇ ದಿನ ಅಧ್ಯಕ್ಷನಾಗಿದ್ದೇನೆ. ಸಚಿವ ಆನಂದ್ ಸಿಂಗ್ ನನಗೆ ಫೋನ್ ಮಾಡಿ ಹೇಳಿದರು. ಬುಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು. ನಾನು ಬುಡಾ ಕಚೇರಿಗೆ ಹೋದೆ. ಶಾಸಕ ರೆಡ್ಡಿ ಅವರಿಗೆ ಮೊದಲು ಕರೆ ಮಾಡಿ ವಿಷಯ ತಿಳಿಸಿದೆ. ಆದರೆ ಸೋಮಶೇಖರ ರೆಡ್ಡಿ ಅವರು ಯಡಿಯೂರಪ್ಪ ಅವರಿಗೆ ಹೇಳಿ ನನಗೆ ನೀಡಲಾಗಿದ್ದ ಹುದ್ದೆಯನ್ನು ಕಸಿಯಲಾಯಿತು. ಸಚಿವ ಆನಂದ್ ಸಿಂಗ್ ಬೇಡ, ದುಡುಕಬೇಡಿ ಎಂದು ಹೇಳಿದರೂ ಕೇಳಲಿಲ್ಲ. ನನಗೆ ಸಿಕ್ಕಿದ ಅವಕಾಶ ಕಸಿಯಲಾಯಿತು ಎಂದು ಆರೋಪಿಸಿದ್ದರು.












Click it and Unblock the Notifications