ಕೃಷಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಮಿಶ್ರಬೆಳೆ ಪದ್ಧತಿ ಸಹಕಾರಿ
ಬಳ್ಳಾರಿ, ಮೇ 06: ಬಳ್ಳಾರಿ ಜಿಲ್ಲೆಯ ಕೃಷಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಮಿಶ್ರಬೆಳೆ ಪದ್ಧತಿ ಅಳವಡಿಕೆ ಸಹಕಾರಿಯಾಗಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಮಣ್ಣಿನ ಗುಣವನ್ನಾಧರಿಸಿ ರೈತರು ಬೆಳೆ ತೆಗೆಯಬೇಕು. ಈ ಕುರಿತು ರೈತರಿಗೆ ಮಾಹಿತಿ ಒದಗಿಸಿ ಎಂದು ಸಂಸದ ಈ. ತುಕಾರಾಮ್ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದ ಈ. ತುಕಾರಾಮ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಸಂಡೂರಿನ ನಂದಿಹಳ್ಳಿ ಪಿ. ಜಿ. ಹಳ್ಳಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಸಂಸದರು, "ಜಿಲ್ಲೆಯ 5 ತಾಲೂಕುಗಳಲ್ಲಿ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಕುರಿತು ರೈತರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿ ಮಾಹಿತಿ ಒದಗಿಸಬೇಕು. ಈ ಕುರಿತು ಕೃಷಿ, ತೋಟಗಾರಿಕೆ ಅಧಿಕಾರಿಗಳು ವಿಶೇಷ ಕ್ರಮ ವಹಿಸಬೇಕು" ಎಂದು ನಿರ್ದೇಶನ ನೀಡಿದರು.
"ಜಿಲ್ಲೆಯಲ್ಲಿ ವಿವಿಧೆಡೆ ಕೆಲ ರೀತಿಯ ಬೆಳೆ ಬೆಳೆಯುತ್ತಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಮಣ್ಣಿನ ಗುಣವನ್ನಾಧರಿಸಿ ರೈತರು ಬೆಳೆ ತೆಗೆಯಬೇಕು. ವಿವಿಧ ರೀತಿಯ ಸರ್ವ ರೀತಿಯ ಬೆಳೆ ಬೆಳೆಯಲು ಒಂದು ಮಾಸ್ಟರ್ ಪ್ಲಾನ್ ಮಾಡಬೇಕು. ಜಿಲ್ಲೆಯ ಯಾವ ಯಾವ ತಾಲೂಕಿನಲ್ಲಿ ಯಾವ ರೀತಿಯ ಮಣ್ಣು ಇದೆ?, ಯಾವ ಕಡೆಗೆ ಯಾವ ರೀತಿ ಬೆಳೆಯುತ್ತಾರೆ? ಎಂಬುದರ ಬಗ್ಗೆ ಅಧ್ಯಯನ ನಡೆಸಲು ಲ್ಯಾಬ್ ಆರಂಭಿಸುವ ಮೂಲಕ ಸಮಗ್ರ ವರದಿ ಸಂಗ್ರಹಿಸಬೇಕು" ಎಂದರು.
ಯಾವ ಮಣ್ಣಿನಲ್ಲಿ ಯಾವ ರೀತಿ ಬೆಳೆ ಬೆಳೆದರೆ ಹೆಚ್ಚು ಲಾಭವಾಗುತ್ತದೆ ಎಂಬುದರ ಬಗ್ಗೆ ಜಿಲ್ಲೆಯ ರೈತರಿಗೆ ಹೊಸದೊಂದು ಮಾರ್ಗದರ್ಶಿ ಯೋಜನೆ ರೂಪಿಸೋಣ ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇರೀತಿಯಾಗಿ ಜಿಲ್ಲೆಯಲ್ಲಿ ಮುಂಬರುವ ಜೂನ್‌ನಿಂದ ಬಿತ್ತನೆ ಕಾರ್ಯಗಳು ಪ್ರಾರಂಭಗೊಳ್ಳಲಿವೆ. ಕಾಳಸಂತೆಯಲ್ಲಿ ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಸರಬರಾಜು ಆಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ರೈತರಿಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಮನವೊಲಿಸಬೇಕು. ಕೃಷಿ, ರೈತರ ವಿಷಯಗಳಿಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ತಾಲ್ಲೂಕುಗಳಲ್ಲಿ ವಿವಿಧೆಡೆ ಸಮರ್ಪಕ ಮೀನು ಮಾರುಕಟ್ಟೆಗಳಿಲ್ಲ, ಎಲ್ಲಿ ಬೇಕೆಂದರಲ್ಲಿ ಮಾರುವುದು ಕಂಡುಬರುತ್ತಿದ್ದು, ಅವರಿಗೆ ಪೂರಕವಾದ ಮೀನು ಮಾರುಕಟ್ಟೆ ಒದಗಿಸಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕರಿಗೆ ಸೂಚಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ಈ ವಿಷಯ ತಂದರು.
ಜಿಲ್ಲೆಯಲ್ಲಿ ಅಸ್ತಮಾ, ಕಿಡ್ನಿ, ಕ್ಯಾನ್ಸರ್ ಸೇರಿದಂತೆ ಇತರೆ ಖಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಬೇಕಾಗುವಂತಹ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಹಾಗೂ ಸಮುದಾಯ ಆಸ್ಪತೆಗಳನ್ನು ಮೇಲ್ದರ್ಜೆಗೇರಿಸಲು ಇರುವ ಮಾನದಂಡ, ಚಿಕಿತ್ಸೆಗೆ ಬೇಕಾಗುವ ಅತ್ಯಾಧುನಿಕ ಉಪಕರಣಗಳು ಸೇರಿದಂತೆ ಯಾವುದೇ ವೈದ್ಯಕೀಯ ಸೌಕರ್ಯಗಳು ಬೇಕಿದ್ದರೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications