ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಗಡ್ಡ ಬಿಟ್ಟಿರುವುದು ಬಿಟ್ಟರೆ ಮತ್ತೇನೂ ಇಲ್ಲ- ಆನಂದ್ ಸಿಂಗ್
ಕಾಂಗ್ರೆಸ್‌ನವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಈ ಯಾತ್ರೆಯಿಂದ ಏನೂ ಬದಲಾಗಿಲ್ಲ, ರಾಹುಲ್ ಗಾಂಧಿ ಗಡ್ಡ ಬಿಟ್ಟಿರುವುದು ಬಿಟ್ಟರೆ ಮತ್ತೇನು ಇಲ್ಲ ಎಂದು ಸಚಿವ ಆನಂದ್ ಸಿಂಗ್ ಲೇವಡಿ ಮಾಡಿದ್ದಾರೆ.
ಬಳ್ಳಾರಿ, ಫೆಬ್ರವರಿ 14: ಚುನಾವಣೆ ಬಂದಾಗ ಇಲ್ಲ, ಸಲ್ಲದ ಆಶ್ವಾಸನೆ ನೀಡಿ ಮತ ಕೇಳುವ ಪಕ್ಷ ನಮ್ಮದಲ್ಲ. ದೇಶ ಕಟ್ಟುವ ಪಕ್ಷ ಬಿಜೆಪಿ. ಚುನಾವಣೆಗಾಗಿ ಸಮಾವೇಶ ಮಾಡುವ ಪಕ್ಷ ಕಾಂಗ್ರೆಸ್ ಎಂದು ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಕಂಪ್ಲಿಯಲ್ಲಿ ನಡೆದ ವಿಜಯ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಆನಂದ್ ಸಿಂಗ್, ಕಾಂಗ್ರೆಸ್‌ನವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಯಾತ್ರೆ ನಡೆಸಿ ಏನು ಕಡೆದು ಗುಡ್ಡೆ ಹಾಕಿದ್ದಾರೋ ಗೊತ್ತಾಗಿಲ್ಲ. ಈ ಯಾತ್ರೆಯಿಂದ ಏನೂ ಬದಲಾಗಿಲ್ಲ, ರಾಹುಲ್ ಗಾಂಧಿ ಗಡ್ಡ ಬಿಟ್ಟಿರುವುದು ಬಿಟ್ಟರೆ ಮತ್ತೇನು ಇಲ್ಲ ಎಂದು ಲೇವಡಿ ಮಾಡಿದರು.
ಕಾಶ್ಮೀರದಲ್ಲಿ ವಿಶಾಲವಾದ ಪ್ರದೇಶದಲ್ಲಿ ಜೋಡೋ ಯಾತ್ರೆ ಕಾರ್ಯಕ್ರಮ ಮಾಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ 370 ರದ್ದು ಪಡಿಸಿದ ಕಾರಣ ಕಾಶ್ಮೀರದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಯ್ತು. 370 ರದ್ದು ಪಡಿಸದಿದ್ದರೆ, ಕಾಂಗ್ರೆಸ್ ನಾಯಕರು ಕಾಶ್ಮೀರದ ಗಡಿಯವರೆಗೂ ಹೋಗುತ್ತಿರಲಿಲ್ಲ ಗಡಿಯಲ್ಲಿಯೇ ಅವರನ್ನು ಎಗರಿಸಿ ಬಿಡುತ್ತಿದ್ದರು ಎಂದರು.

ಗುಂಡಿಗೆ ಇಲ್ಲದ ಗಂಡುಗಳು ಕಾಂಗ್ರೆಸ್‌ನಲ್ಲಿದ್ದಾರೆ
ಕಾಂಗ್ರೆಸ್‌ನವರದ್ದು ಜೋಡೋ ಯಾತ್ರೆಯಲ್ಲ, ಭಾರತ್ ತೋಡೋ ಯಾತ್ರೆ. ಕ್ಷೇತ್ರದ ಅಭಿವೃದ್ಧಿಗಳ ಬಗ್ಗೆ ಯೋಚನೆ ಇಲ್ಲದ ಕಾಂಗ್ರೆಸ್ ನಾಯಕರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ..? ಬಿಜೆಪಿ ಗೆಲ್ಲಿಸಿ ಅಂತ ಸಿದ್ದರಾಮಯ್ಯನವರೇ ಮೊನ್ನೆ ಹೇಳಿದ್ದರು. ಅವರೇನು ಮಾತನಾಡುತ್ತಾರೋ ಅವರಿಗೆ ಗೊತ್ತಿಲ್ಲ. ಮೋದಿ ವಿಶ್ವಗುರು, ಪರಮಾತ್ಮ ಕೊಟ್ಟ ಕೊಡುಗೆ ಅವರು ಪ್ರಧಾನಿಯಾಗಿದ್ದು, ಗುಂಡಿಗೆ ಇಲ್ಲದ ಗಂಡುಗಳು ಕಾಂಗ್ರೆಸ್‌ನಲ್ಲಿದ್ದಾರೆ. ನಮ್ಮಲ್ಲಿ ಗುಂಡಿಗೆ ಇರುವಂತಹ ನಾಯಕರಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಬಿಜೆಪಿ ಹಡಗು ತುಂಬುತ್ತಿದೆ ಕಾಂಗ್ರೆಸ್ ಹಡಗು ಮುಳುಗುತ್ತಿದೆ
ಕಾಂಗ್ರೆಸ್‌ನಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಕೃಷ್ಣದೇವರಾಯನ ಆಳ್ವಿಕೆ ಬರಬೇಕಾದರೆ ಟಿಪ್ಟು ಸಂತಾನ ಹೋಗಬೇಕು. ಜನರು ಕೃಷ್ಣದೇವರಾಯನ ಆರಾಧನೆ ಮಾಡುತ್ತಾರೆ. ಟಿಪ್ಪುವಿನ ಆರಾಧನೆ ಮಾಡಲ್ಲ . ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ. ಬಿಜೆಪಿ ಹಡಗು ತುಂಬುತ್ತಿದೆ ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗಾಗಿ ಜಗಳ ಜೋರಾಗಿದೆ. ಇವರಿಬ್ಬರನ್ನ ಮನೆಗೆ ಕಳುಹಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಕಾರ್ಯಕರ್ತರ ಧ್ವನಿ ಅಡಗಿಸಿದ್ದಾರೆ
ನೀವು ಕಾರ್ಯಕರ್ತರು ಕಾಂಗ್ರೆಸ್ ಧ್ವನಿ ಅಡಗಿಸಿದ್ದೀರಿ, ಆದರೂ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಕಾರ್ಯಕರ್ತರ ಧ್ವನಿ ಅಡಗಿಸಿದ್ದಾರೆ. ಇಂದಿರಾ ಗಾಂಧಿ ಕಾಲಘಟ್ಟದಲ್ಲಿ ಚುನಾವಣೆಗೆ ಕಾಂಗ್ರೆಸ್ನಿಂದ ಲೈಟ್ ಕಂಬ ನಿರ್ಮಿಸಿದರೂ ಗೆಲುವು ಸಾಧಿಸುತ್ತಿದ್ದ ಸಂದರ್ಭವೊಂದಿತ್ತು. ಆದರೆ ಇವತ್ತು ರಾಹುಲ್ ಗಾಂಧಿ ವೈನಾಡಿನಲ್ಲಿ ಬಂದು ಸ್ಪರ್ಧೆ ಮಾಡಬೇಕಾಯಿತು. ಇವತ್ತು ಸಿದ್ದರಾಮಯ್ಯಗೂ ಸಹ ಕ್ಷೇತ್ರ ಇಲ್ಲದಾಗಿದೆ. ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲ, ಆದರೆ ಮತ್ತೆ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ ತಾಕತ್ತಿದ್ದರೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ನಮ್ಮ ತಾಕತ್ತು ತೋರಿಸುತ್ತೇವೆ ಎಂದರು.

ಪ್ರತಿಪಕ್ಷಗಳು ನಮಗೆ ಸವಾಲು ಹಾಕಲಿ
ಇನ್ನು ಬಿಜೆಪಿ ಜಾತಿ, ಮತೀಯ ಆಧಾರದ ಮೇಲೆ ಚುನಾವಣೆಗೆ ಹೋಗುವುದಿಲ್ಲ. ಅಭಿವೃದ್ಧಿ ಕಾರ್ಯದ ಮೇಲೆ ನಾವು ಚುನಾವಣೆಗೆ ಹೋಗುತ್ತೆವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಚುನಾವಣೆ ಕಾರ್ಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಭಿವೃದ್ಧಿ ವಿಷಯದ ಮೇಲೆ ಪ್ರತಿಪಕ್ಷಗಳು ನಮಗೆ ಸವಾಲು ಹಾಕಲಿ. ಈ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯವೇ ಮಂತ್ರವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್, ಪುರಸಭೆ ಅಧ್ಯಕ್ಷೆ ಶಾಂತಲಾ, ಉಪಾಧ್ಯಕ್ಷೆ ನಿರ್ಮಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್. ಹನುಮಂತ, ಸಿದ್ದೇಶ್ ಯಾದವ್, ಸಿದ್ದರಾಜು, ಮುರಹರಿಗೌಡ, ವಿರೂಪಾಕ್ಷಿಗೌಡ, ಚಂದ್ರಶೇಖರ್ ಪಾಟೀಲ್ ಅಲಿಗೇರಿ, ಅಳ್ಳಳ್ಳಿ ವೀರೇಶ್, ಜಿ. ಸುಧಾಕರ್, ಪಿ. ಬ್ರಹ್ಮಯ್ಯ, ಪುರುಷೋತ್ತಮ, ಬಿ. ಸಿದ್ದಪ್ಪ ಉಪಸ್ಥಿತರಿದ್ದರು.












Click it and Unblock the Notifications