ಗ್ರಾಮೀಣ ಮಟ್ಟದಲ್ಲಿ ಪದವಿ ವಿದ್ಯಾರ್ಥಿಗಳಿಗೆ ನೆರವಾದ ನರೇಗಾ ಯೋಜನೆ
ಬಳ್ಳಾರಿ, ನವೆಂಬರ್ 30: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಥವ ನರೇಗಾ ಗ್ರಾಮೀಣ ಮಟ್ಟದಲ್ಲಿ ಬಡ ಕುಟುಂಬದವರಿಗೆ ಸಹಾಯಕವಾಗಿದೆ. ತಮ್ಮ ಊರಿನಲ್ಲಿಯೇ ಅವರಿಗೆ ಉದ್ಯೋಗವನ್ನು ಯೋಜನೆಯಡಿ ನೀಡಲಾಗುತ್ತದೆ. ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದನ್ನು ಇದು ತಪ್ಪಿಸುವ ಜೊತೆಗೆ ಆರ್ಥಿಕವಾಗಿಯೂ ಲಾಭವಾಗಿದೆ. ಈಗ ಈ ಯೋಜನೆ ವಿದ್ಯಾರ್ಥಿಗಳಿಗೆ ನೆರವಾದ ಯಶಸ್ಸಿನ ವರದಿ ಇಲ್ಲಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿಗಳಿಗೆ ನರೇಗಾ ಯೋಜನೆ ಕೈಹಿಡಿದಿದೆ. ಶುಲ್ಕ ಕಟ್ಟಲು ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ಶಿಕ್ಷಣ ಮುಂದುವರೆಸಲು ಅವರಿಗೆ ಭರವಸೆ ಮೂಡಿಸಿದೆ.

ಕೂಲಿ ಹಣದಲ್ಲಿ ಶುಲ್ಕ ಪಾವತಿ: ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ವಿದ್ಯಾರ್ಥಿ ಹುಸೇನಪ್ಪ ತನ್ನ ಪದವಿ ಶಿಕ್ಷಣಕ್ಕಾಗಿ ನೀಡಬೇಕಾದ ಶುಲ್ಕದ ಕುರಿತು ಮನೆಯವರಿಗೆ ತಿಳಿಸದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ತನ್ನ ರಜಾದಿನಗಳಲ್ಲಿ ಕೆಲಸ ಮಾಡುತ್ತಿದ್ದು, ಪಾಲಕರ ಸಹಾಯ ಪಡೆಯದೇ ತಾನೇ ದುಡಿದು ತನ್ನ ದಾಖಲಾತಿ, ಪುಸ್ತಕ ಖರೀದಿ, ಬಸ್‌ಪಾಸ್ ವ್ಯವಸ್ಥೆಗೆ ನರೇಗಾ ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ.
ಬಿಎ ತೃತೀಯ ವರ್ಷದಲ್ಲಿ ಓದುತ್ತಿರುವ ಹುಸೇನಪ್ಪ ಕೆಲಸಕ್ಕೂ ಸೈ, ಓದಿನಲ್ಲೂ ಸೈ ಎನಿಸಿಕೊಂಡಿದ್ದು, ಕೂಲಿಕಾರರ ಜೊತೆಗೂಡಿ ನರೇಗಾದಡಿ ಕೈಗೊಂಡ ನಾಲಾ ಸುಧಾರಣೆ ಕಾಮಗಾರಿ ಕೆಲಸಕ್ಕೆ ಹೋಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಹುಸೇನಪ್ಪನ ಮನೆಯವರು ಮೂಲ ಕೃಷಿ ಕುಟುಂಬವಾಗಿದ್ದು, ಜಮೀನಲ್ಲಿ ಬೆಳೆದ ದವಸ ಧಾನ್ಯದಿಂದ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ತಂದೆ, ತಾಯಿ, ತಮ್ಮ, ಅಜ್ಜಿ ವಾಸಿಸುತ್ತಿದ್ದಾರೆ. ಸಹೋದರ ಪಿಯುಸಿ ಓದುತ್ತಿದ್ದು, ಆತನ ಶಿಕ್ಷಣಕ್ಕೂ ನರೇಗಾ ಕೂಲಿ ಹಣ ಉಪಯೋಗಿಸಲಾಗುತ್ತಿದೆ. ಇವರ ಮನೆಯಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದು, ಕುಟುಂಬ ನಿರ್ವಹಣೆಗೆ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾದಡಿ ಸುಮಾರು 50ಕ್ಕೂ ಹೆಚ್ಚು ಪದವೀಧರ, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ರಜಾ ದಿನಗಳಲ್ಲಿ ಯೋಜನೆಯಡಿ ಕೆಲಸ ಮಾಡಿ ತಂದೆ-ತಾಯಿಗೆ ಹೊರೆಯಾಗದೇ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ತಾವೇ ಸಂಪಾದಿಸುತ್ತಾರೆ.
ಈ ಕುರಿತು ವಿದ್ಯಾರ್ಥಿ ಹುಸೇನಪ್ಪ ಮಾತನಾಡಿ, "ಕಳೆದ ವರ್ಷವಷ್ಟೇ ನನ್ನ ಪದವಿ ವಿದ್ಯಾಭ್ಯಾಸ ಮುಗಿಯಿತು. ರಜೆ ಸಮಯದಲ್ಲಿ ನರೇಗಾ ಕೆಲಸಕ್ಕೆ ಹೋಗುತ್ತಿದ್ದೆ. ಬಂದ ಹಣದಿಂದ ನನ್ನ ಪದವಿ ವಿದ್ಯಾಭ್ಯಾಸದ ವೇಳೆ ಕಾಲೇಜು ಫೀಸ್, ಪುಸ್ತಕ ಮತ್ತು ಬಸ್‌ಪಾಸ್‌ಗಾಗಿ ವ್ಯಯಿಸಿದ್ದೆ. ಮನೆಯಲ್ಲಿ ಹಣ ಕೇಳುತ್ತಿರಲಿಲ್ಲ" ಎಂದು ಹೇಳಿದ್ದಾರೆ.
ಉಪ್ಪಾರ-ಹೊಸಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನಾಗಮಣಿ ಅತ್ತಳ್ಳಿ ಮಾತನಾಡಿ, "ಗ್ರಾಮ ಪಂಚಾಯತಿಗಳು ಜನಸ್ನೇಹಿಯಾಗಿದ್ದು, ನರೇಗಾ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಯೋಜನೆ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್ ಸಭೆ, ಗ್ರಾಮ ಸಭೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications