ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು: ತಜ್ಞರ ಸಮಿತಿಯಿಂದ ತನಿಖೆ

ಬಳ್ಳಾರಿ, ಡಿಸೆಂಬರ್ 08: ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಭೆಯನ್ನು ನಡೆಸಿದ್ದಾರೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ಮನೆಗಳಿಗೆ ಭೇಟಿಯನ್ನು ನೀಡಿ ಸಾಂತ್ವನವನ್ನು ಹೇಳಿದರು. ಬಾಣಂತಿಯರ ಸಾವಿನ ಪ್ರಕರಣದ ಕುರಿತು ಸಹ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಪತ್ರಿಕಾಗೋಷ್ಠಿಯನ್ನು ಸಚಿವ ದಿನೇಶ್ ಗುಂಡೂರಾವ್ ನಡೆಸಿದರು. "ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದರ ಕುರಿತಾಗಿ ಉನ್ನತ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಿ, ಅವರು ನೀಡುವ ವರದಿಯನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.

Maternal Deaths In Ballari Hospital Expert Committee To Probe

ಸಚಿವರು ಆಸ್ಪತ್ರೆಯ ಹೆರಿಗೆ ಕೋಣೆಗಳ ಸಮುಚ್ಚಯಕ್ಕೆ ಭೇಟಿ ನೀಡಿ, ಬಾಣಂತಿಯರ ಆರೋಗ್ಯ ವಿಚಾರಿಸಿದರು. ಜಿಲ್ಲಾ ಆಸ್ಪತ್ರೆಯಿಂದ ಕೈಗೊಳ್ಳುವ ಆರೈಕೆ ಕ್ರಮಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ. ವಿ. ಜೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್. ಬಸರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಜೊತೆಗಿದ್ದರು.

ಸಚಿವರು ಹೇಳಿದ್ದೇನು?; ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, "ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ಸ್‌ ಲ್ಯಾಬ್ ಪಾಸಿಟಿವ್‌ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ. ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು" ಎಂದರು.

"ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ತಜ್ಞರ ಸಮಿತಿ ತಂಡ ಕಳುಹಿಸುತ್ತೇವೆ. ಎಲ್ಲಿ ತಪ್ಪಾಗಿದೆ? ಅದನ್ನು ಕಂಡು ಹಿಡಿಯಬೇಕಿದೆ. ಬಾಣಂತಿಯರ ಅಸಹಜ ಸಾವಿನ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ತನಿಖೆ ನಡೆಸಲು ರಾಜೀವ್ ಗಾಂಧಿ ವಿವಿ ಉಪಕುಲಪತಿ ನೇತೃತ್ವದಲ್ಲಿ ತಂಡ ರಚಿಸಿ ವರದಿ ಪಡೆಯಲಾಗಿದೆ. ಆರಂಭದಲ್ಲಿಯೇ ಈ ಐವಿ ಫ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿಸಲಾಗಿತ್ತು. ಸದ್ಯ ಈ ಕಂಪನಿಯ ಐವಿ ಫ್ಲೂಯಿಡ್ ಸಂಪೂರ್ಣವಾಗಿ ಸರಬರಾಜು ಸ್ಥಗಿತ ಮಾಡಲಾಗಿದೆ" ಎಂದು ಸಚಿವರು ಹೇಳಿದರು.

ಬಳಿಕ ಸಚಿವ ದಿನೇಶ್ ಗುಂಡೂರಾವ್ ಬಳ್ಳಾರಿ ಜಿಲ್ಲಾಸ್ಪತ್ರೆಯ ಮುಂಭಾಗ ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಅವರ ಬೇಡಿಕೆಗಳನ್ನು ಆಲಿಸಿದರು. ಬಾಣಂತಿಯರ ಸಾವು ಪ್ರಕರಣದಲ್ಲಿ ಸೂಕ್ತವಾದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲಾದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕೂಡಲೇ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.

ಸಾಂತ್ವನ ಹೇಳಿದ ಸಚಿವರು: ಸಚಿವ ದಿನೇಶ್ ಗುಂಡೂರಾವ್ ಬಳ್ಳಾರಿ ತಾಲ್ಲೂಕಿನ ಬಸರಕೋಡು, ಬಾಣಾಪುರ ಗ್ರಾಮಗಳ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನವನ್ನು ಹೇಳಿದರು. ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಕಮ್ಮಾರಿ ಲಲಿತಾ ಮನೆಗೆ ಭೇಟಿ ನೀಡಿ, ಪೋಷಕರ ಜೊತೆ ಮಾತನಾಡಿ ಸಾಂತ್ವನ ಹೇಳಿದರು. ಧೈರ್ಯದಿಂದ ಮಗುವನ್ನು ಆರೈಕೆ ಮಾಡಬೇಕು, ಸರ್ಕಾರದಿಂದ ಹೆಚ್ಚಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಬಾಣಾಪುರ ಗ್ರಾಮದ ಮೃತ ಹೂಗಾರ ನಂದಿನಿ ಮನೆಗೆ ಸಚಿವರು ಭೇಟಿ ಕೊಟ್ಟರು, ಸಾಂತ್ವನ ಹೇಳಿದರು.

ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣದ ಕುರಿತು ವಿರೋಧ ಪಕ್ಷಗಳು ಚರ್ಚೆ ನಡೆಸುವ ಸಾಧ್ಯತೆ ಇದೆ. ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ 6 ಬಾಣಂತಿಯರ ಸಾವಿನ ಕುರಿತು ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲು ಮಾಡಿಕೊಂಡಿದೆ. ಲೋಕಾಯುಕ್ತ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್​ ತನಿಖೆಗೆ ಆದೇಶಿಸಿದ್ದು, ಶನಿವಾರ ಲೋಕಾಯುಕ್ತ ಪೊಲೀಸರ ತಂಡ ಆಸ್ಪತ್ರೆಯಲ್ಲಿ ಪರಿಶೀಲನೆಯನ್ನು ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+