ನಂದಿನಿ ಸಿಹಿ ಉತ್ಸವ; ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ
ಬಳ್ಳಾರಿ, ಆಗಸ್ಟ್ 19; ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಂದಿನಿ ಸಿಹಿ ಉತ್ಪನ್ನಗಳ ಉತ್ಸವಕ್ಕೆ ಚಾಲನೆ ನೀಡಿದೆ. ನಂದಿನಿ ಹಾಲಿನ ವಿವಿಧ ಸಿಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ ಜನರಿಗೆ ಸಿಗಲಿದೆ.
ರಾಬಕೋ ಹಾಲು ಒಕ್ಕೂಟದ ವತಿಯಿಂದ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಆಗಸ್ಟ್ 19ರಿಂದ 15 ದಿನಗಳವರೆಗೆ ಈ ಉತ್ಸವ ನಡೆಯಲಿದ್ದು, ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ಉತ್ಪನ್ನಗಳಿದ್ದು, ಉತ್ಪನ್ನಗಳಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ನಂದಿನಿ ಸಿಹಿ ಉತ್ಪನ್ನಗಳ ಉತ್ಸವದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ರಾಬಕೋ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ. ತಿರುಪತಪ್ಪ ಜನರಲ್ಲಿ ಮನವಿ ಮಾಡಿದ್ದಾರೆ.

ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯ ಕೂಲ್ ಕಾರ್ನರ್ ರಸ್ತೆಯಲ್ಲಿರುವ ಉದಯಕುಮಾರ್ ಅವರ ನಂದಿನಿ ಎಟಿಎಂ ಪಾರ್ಲರ್ ಆವರಣದಲ್ಲಿ ಗುರುವಾರ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಹಾಲು ಮಂಡಳಿ ವತಿಯಿಂದ ರಾಜ್ಯದಲ್ಲಿರುವ ಎಲ್ಲ 14 ಎಲ್ಲಾ ಹಾಲು ಒಕ್ಕೂಟಗಳಲ್ಲೂ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದೆ. ಈ ವರ್ಷದ ಉತ್ಸವಕ್ಕೆ ಈಗ ಚಾಲನೆ ಸಿಕ್ಕಿದೆ.
ಮೈಸೂರ್ ಪಾಕ್, ಧಾರವಾಡ ಪೇಡಾ, ಬೆಳಗಾಂ ಕುಂದ, ಏಲಕ್ಕಿ ಪೇಡಾ, ಬಾದಾಮಿ ಪೇಡಾ, ಬೆಸನ್ ಲಡ್ಡು, ಸಿರಿಧಾನ್ಯ ಲಾಡು ಮತ್ತು ಇತರೆ ಸಿಹಿ ಉತ್ಪನ್ನಗಳನ್ನು ಒಕ್ಕೂಟದ ಎಲ್ಲಾ ಶಾಫಿ/ ಎಟಿಎಂ ಪಾರ್ಲರ್/ ಕ್ಷೀರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಬಕೋ ಹಾಲು ಒಕ್ಕೂಟದ ಬಳ್ಳಾರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್. ವೆಂಕಟೇಶ ಗೌಡ ಮಾತನಾಡಿ, "ನಂದಿನಿ ಹಾಲಿನ ಬಗ್ಗೆ ವಿವರಣೆ ನೀಡುತ್ತಾ ಒಕ್ಕೂಟಕ್ಕೆ ಲಾಭ ಮಾಡುವುದಷ್ಟೇ ಅಲ್ಲದೇ ರೈತರ ಹಿತರಕ್ಷಣೆ ಮಾಡುವುದರ ಜೊತೆಗೆ ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಒಕ್ಕೂಟದ ಮುಖ್ಯ ಉದ್ದೇಶವಾಗಿದೆ" ಎಂದರು.
ಖಾಸಗಿ ಡೈರಿಯವರಿಗೆ ಲಾಭ ಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ. ನಂದಿನಿ ಹಾಲು ಮತ್ತು ಕಲಬೆರಕೆ ಹಾಲಿನ ವ್ಯತ್ಯಾಸವನ್ನು ಜನರು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಕರಬೆರಕೆ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ.
ಮನೆಗಳಲ್ಲಿ ನಂದಿನಿ ಹಾಲಿನ ವಿವಿಧ ಮಾದರಿಯ ಹಾಲಾದ ನಂದಿನಿ ಶುಭಂ, ನಂದಿನಿ ಸ್ಪೆಷಲ್ ಹಾಲು, ನಂದಿನಿ ಶುಭಂ ಗೋಲ್ಡ್ ಹಾಗೂ ನಂದಿನಿ ಹಾಲನ್ನು ಬಳಸುವಂತೆ ಜನರಿಗೆ ಮನವಿ ಮಾಡಲಾಗಿದೆ. ಈ ಮೂಲಕ ರೈತರಿಗೆ ಸಹ ಉಪಯೋಗವಾಗಲಿದೆ.
ಬೂದುಗುಂಪ ಡೈರಿ ಘಟಕದಲ್ಲಿ ಉತ್ಪಾದಿಸಲಾಗುತ್ತಿರುವ ನಂದಿನಿ ತೃಪ್ತಿ ಹಾಲನ್ನು ರೆಫ್ರಿಜರೇಟರ್ ಸಹಾಯವಿಲ್ಲದೇ 90 ದಿನಗಳ ಕಾಲ ತೆರೆದ ಜಾಗದಲ್ಲಿ ಕೆಡದಂತೆ ಇಡಲು ಅವಕಾಶವಿರುವುದರಿಂದ ನಂದಿನಿ ತೃಪ್ತಿ ಹಾಲನ್ನು ಉಪಯೋಗಿಸುವಂತೆ ಕರೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಶ್ರೀನಿವಾಸ ಮೊತ್ಕರ್, ಒಕ್ಕೂಟದ ವ್ಯವಸ್ಥಾಪಕರಾದ ಜೆ. ಕೆ. ಎರ್ರಿಸ್ವಾಮಿ, ಉಪ ವ್ಯವಸ್ಥಾಪಕರಾದ ಡಾ.ಗಂಗಾಧರ, ಎಸ್.ಎನ್.ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಉತ್ಸವಕ್ಕೆ ಚಾಲನೆ; ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಸಹ ಗುರುವಾರ ಮಾಚೇನಹಳ್ಳಿಯಲ್ಲಿರುವ ಹೈಟೆಕ್ ಪಾರ್ಲರ್‌ನಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದೆ. ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಶೇ 10ರಷ್ಟು ರಿಯಾಯಿತಿ ಸಿಹಿ ಉತ್ಸವದ ಸಂದರ್ಭದಲ್ಲಿ ಸಿಗಲಿದೆ.
ಶಿಮುಲ್ ಒಕ್ಕೂಟದ ವ್ಯಾಪ್ತಿಯಲ್ಲಿ 1520 ಹಾಲಿನ ಡೀಲರ್‌ಗಳಿದ್ದಾರೆ. 74 ಫ್ರಾಂಚೈಸಿ, 50 ಸ್ವಂತ ಪಾರ್ಲರ್‌ಗಳ ಮೂಲಕ ಪ್ರತಿನಿತ್ಯ 2.30 ಲಕ್ಷ ಲೀಟರ್ ಹಾಲು ಮತ್ತು ಸುಮಾರು 32 ಸಾವಿರ ಕೆಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ.












Click it and Unblock the Notifications