ಬಳ್ಳಾರಿ: ಗೋಪೂಜೆ ನೆರವೇರಿಸಿ ಮೊದಲ ಮತದಾನ ಮಾಡಿದ ಅರುಣಾ ಲಕ್ಷ್ಮೀ
ಬಳ್ಳಾರಿ, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಮೊದಲ ಮತದಾನ ಮಾಡಿದ್ದಾರೆ.
ಬಳ್ಳಾರಿ ನಗರದ ಹವಂಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 5ರಲ್ಲಿ ಅರುಣಾ ಲಕ್ಷ್ಮೀ ಮತದಾನ ಮಾಡಿದ್ದಾರೆ. ಅರುಣಾ ಲಕ್ಷ್ಮೀಗೆ ತಂದೆ ಪರಮೇಶ್ವರ್ ರೆಡ್ಡಿ, ತಾಯಿ ನಾಗಲಕ್ಷ್ಮಿ ಹಾಗೂ ಮಗಳು ಬ್ರಹ್ಮಿಣಿ ಸಾಥ್ ನೀಡಿದ್ದು, ಕುಟುಂಬಸ್ಥರು ಕೂಡ ಮತದಾನ ಮಾಡಿದ್ದಾರೆ.

ಮತಗಟ್ಟೆಗೆ ತೆರಳುವ ಮುನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಬಳ್ಳಾರಿಯ ಹವಂಭಾವಿಯ ತಮ್ಮ ನಿವಾಸದಲ್ಲಿ ವಿಶೇಷ ಗೋ ಪೂಜೆ ನೆರವೇರಿಸಿದ್ದಾರೆ. ಆರ್ಚಕ ಸಮ್ಮುಖದಲ್ಲಿ ಗೋ ಪೂಜೆ ನೆರವೇರಿಸಿದ ಅರುಣಾ ಲಕ್ಷ್ಮೀ ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತಗಟ್ಟೆಗಳತ್ತ ತೆರಳುತ್ತಿದ್ದಾರೆ. ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವ ಕಾರಣಕ್ಕೆ ಬೆಳಗ್ಗೆಯೇ ಜನ ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ.ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1222 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಜಿಲ್ಲೆಯಲ್ಲಿ 295 ಸೂಕ್ಷ್ಮ ಮತಗಟ್ಟೆಗಳು 74 ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications