ಜನಾರ್ಧನ ರೆಡ್ಡಿಯನ್ನು ವಜ್ರಕ್ಕೆ ಹೋಲಿಸಿದ ಅರುಣಾ ಲಕ್ಷ್ಮಿ: ಇದರ ಹಿಂದಿರುವ ಉದ್ದೇಶವೇನು?
ಬಳ್ಳಾರಿ, ಮೇ, 08: ರಾಜ್ಯ ವಿಧಾನಸಭೆ ಚುನವಣೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ರಾಜಕೀಯ ನಾಯಕರ ನಡುವೆ ವಾಗ್ವಾದಗಳು ಕೂಡ ಮುಂದುವರೆದಿವೆ. ಅದೇ ರೀತಿ ಯಾರು ಏನೇ ಹೇಳಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ವಜ್ರ ಇದ್ದಂತೆ ಎಂದು ಕೆಆರ್‌ಪಿ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಅವರು ಹೇಳಿದರು.
ಬಳ್ಳಾರಿ ನಗರದ ಹಾವಂಭಾವಿ ಪ್ರದೇಶದ ರೆಡ್ಡಿ ಅವರ ಹೆಲಿಪ್ಯಾಡ್ ಪ್ರದೇಶದಲ್ಲಿ ಏರ್ಪಡಿಸಿದ್ದ ಕೆಆರ್‌ಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಜನಾರ್ದನರೆಡ್ಡಿ ಯಾರನ್ನು ಬೆಳೆಸಿದರೋ ಅವರು ಈಗ ರೆಡ್ಡಿ ಅವರನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ. ರಾಜಕೀಯ ಕುತಂತ್ರದಿಂದ ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಜನಾರ್ದನರೆಡ್ಡಿ ನಾಲ್ಕು ವರ್ಷ ಜೈಲಿಗೆ ಹೋದಾಗ ನಾವು ಮನೆಯಲ್ಲಿ ಹಬ್ಬ ಮಾಡಿಲ್ಲ ಎಂದರು.

ಭಗವಂತ ನಮ್ಮ ಕುಟುಂಬಕ್ಕೆ ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ ನಮ್ಮಿಂದ ಬೆಳೆದವರು ಮಾತ್ರ ದೂರವಾದರು. ಕರುಣೆ ಇಲ್ಲದ ರಾಜಕೀಯ ಗುಂಪು ತಯಾರು ಆಯ್ತು, ಆ ಗುಂಪಿನಲ್ಲಿ ನಮ್ಮವರು ಸೇರಿಕೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಜನಾರ್ದನರೆಡ್ಡಿ ರಾಜಿ ಆಗುವುದಿಲ್ಲ. ನಮ್ಮವರೇ ತಂತ್ರ, ಕುತಂತ್ರದಿಂದ ಜನಾರ್ದನರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಮಾಡಿದ್ದಾರೆ ಎಂದು ದೂರಿದರು.
ಬಳ್ಳಾರಿ ನಗರ ಅಭ್ಯರ್ಥಿ ಆಗಿ ಘೋಷಣೆ ಆದಾಗ ಸೋಮಶೇಖರ್ ರೆಡ್ಡಿ ಅಪ್ತರೊಬ್ಬರು ನನಗೆ ಬಳ್ಳಾರಿ ನಗರದಿಂದ ಸ್ಪರ್ಧೆ ಬೇಡ. ಅಲ್ಲದೆ ನೀವು ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಅಂತಾ ಹೇಳಿದ್ದರು. ಜನಾರ್ದನರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಮಾಡಿದಂತೆ ನನ್ನನ್ನು ದೂರ ಮಾಡಬಹುದು. ಹೀಗಾಗಿ ನಾನು ಬಳ್ಳಾರಿ ನಗರದಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದೆ ಎಂದು ಪರೋಕ್ಷವಾಗಿ ಸೋಮಶೇಖರ್‌ರೆಡ್ಡಿ ವಿರುದ್ದ ವಾಗ್ದಾಳಿ ನಡೆಸಿದರು.
ನಮ್ಮವರು ನಮ್ಮ ಬಗ್ಗೆ ಊರಿನಲ್ಲಿ ಇರುವುದಿಲ್ಲ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮನ್ನು ಬಳ್ಳಾರಿಯಿಂದ ದೂರ ಮಾಡಿದವರು ತಮ್ಮ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿಕೊಳ್ಳಲಿ. ಬಹಿರಂಗ ಸಮಾವೇಶದಲ್ಲಿ ಸೆರಗೊಡ್ಡಿ ಮತ ಕೇಳಿದ ಅರುಣಾ ಲಕ್ಷ್ಮೀ, ಯಾರೇ ಏನೇ ಮಾತನಾಡಿದರೂ ಜನಾರ್ದನರೆಡ್ಡಿ ವಜ್ರ ಎಂದು ಹೊಗಳಿದರು.
ಸಮಾವೇಶದಲ್ಲಿ ಗೋನಾಳ ರಾಜಶೇಖರ ಗೌಡ, ಮಾಜಿ ಮೇಯರ್ ವೆಂಕಟರಮಣ, ಕೋನಂಕಿ ರಾಮಪ್ಪ, ಕೋನಂಕಿ ತಿಲಕ್, ಮುನ್ನಾಭಾಯ್, ಕೊಳಗಲ್ ಅಂಜಿನಿ, ಹಂಪಿ ರಮಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications