ಕರ್ನಾಟಕ ಚುನಾವಣೆ; ಅನಂತಪುರ, ಕರ್ನೂಲ್ ಅಧಿಕಾರಿಗಳ ಜೊತೆ ಮಹತ್ವದ ಸಭೆ
ಬಳ್ಳಾರಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಬಳ್ಳಾರಿ, ಮಾರ್ಚ್ 17; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಜಿಲ್ಲಾಡಳಿತಗಳು ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣಾ ಕಾರ್ಯಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ರಾಜ್ಯದ ಗಡಿ ಭಾಗದ ಜಿಲ್ಲೆಗಳು ಚುನಾವಣಾ ಸಮಯದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿವೆ.
ಸೋಮವಾರ ಬಳ್ಳಾರಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಯ ಕಂದಾಯ ಮತ್ತು ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ಸಭೆ ನಡೆಸಿದರು. ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಚರ್ಚೆ ನಡೆಸಿದರು.

ಅಂತರರಾಜ್ಯ ಗಡಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕರಿಸುವಂತೆ ಪವನ್ ಕುಮಾರ್ ಮಾಲಪಾಟಿ ಅಧಿಕಾರಿಗಳಿಗೆ ಮನವಿ ಮಾಡಿದರು. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ 52 ಗಡಿಭಾಗದ ಹಳ್ಳಿಗಳು, ರಸ್ತೆ ಮೂಲಕ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆಗಳ ಹಿನ್ನಲೆಯಲ್ಲಿ ಸಕಾಲಕ್ಕೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ 12 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ದಾಖಲೆಗಳಿಲ್ಲದೇ ಹಣ ಸಾಗಾಣೆ, ಮದ್ಯ, ಉಡುಗೊರೆ ಹಾಗೂ ವಸ್ತುಗಳನ್ನು ಸಾಗಾಣೆ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಣ್ಗಾವಲು ತಂಡಗಳನ್ನು ರಚಿಸಲಾಗುತ್ತಿದ್ದು, ಸಕಾಲಕ್ಕೆ ಮಾಹಿತಿ ನೀಡಿದರೆ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಗಡಿಭಾಗದ ಪೊಲೀಸ್ ಠಾಣೆಗಳ ಎಲ್ಲಾ ಹಂತದ ಅಧಿಕಾರಿಗಳು ವಾಟ್ಸಪ್ ಗ್ರೂಪ್ ರಚಿಸಿಕೊಂಡು ನಿತ್ಯದ ಬೆಳವಣಿಗೆಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅಕ್ರಮವಾಗಿ, ಅನುಮಾನಸ್ಪದ ವಸ್ತುಗಳ ಸಾಗಾಟ ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಚುನಾವಣೆಯನ್ನು ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಗಡಿಭಾಗದ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಹಕಾರ ಅವಶ್ಯಕತೆಯಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಆಕ್ರಮ ಹಣ, ಮದ್ಯ, ಬೆಲೆಬಾಳುವ ವಸ್ತುಗಳ ಸಾಗಾಣೆಯ ಮಾಹಿತಿಯನ್ನು ಸಂಗ್ರಹ ಮಾಡಬೇಕು, ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಬ್ಯಾನರ್, ಹೋರ್ಡಿಂಗ್‌ಗೆ ಅನುಮತಿ ಕಡ್ಡಾಯ; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಶೀಘ್ರವೇ ಜಾರಿಯಾಗಲಿದೆ. ಈ ಜಿಲ್ಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವಂತಹ ಬ್ಯಾನರ್, ಹೋರ್ಡಿಂಗ್ ಮತ್ತು ಕರಪತ್ರಗಳನ್ನು ಮುದ್ರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸೂಚನೆ ನೀಡಿದ್ದಾರೆ. ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರೊಂದಿಗೆ ಅವರು ಸಭೆಯನ್ನು ನಡೆಸಿದ್ದಾರೆ.
ರಾಜಕೀಯವಾದ ಬ್ಯಾನರ್, ಕರಪತ್ರಗಳನ್ನು ಮುದ್ರಿಸಲು ಬರುವರರ ಹತ್ತಿರ ನಿಗದಿತ ನಮೂನೆಯಲ್ಲಿ ಸಹಿ ಪಡೆದ ನಂತರ ಮುದ್ರಿಸಬೇಕು. ಕರಪತ್ರವಾದಲ್ಲಿ ಮುದ್ರಣ ಮಾಡಿದ ಮೂರು ದಿನಗಳಲ್ಲಿ ಮುದ್ರಣ ಮಾಡಿದ 4 ಪ್ರತಿಗಳು, ಮುದ್ರಣಕ್ಕೆ ಖರ್ಚಾದ ವೆಚ್ಚದ ಬಿಲ್ ಸೇರಿದಂತೆ ಮುದ್ರಿಸಿದ ವಿವರವನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು. ಜಾತಿ ವೈಷಮ್ಯವುಳ್ಳ ಮಾಹಿತಿ, ಅಸಭ್ಯ ಪ್ರಚಾರ, ಸುಳ್ಳು ಮಾಹಿತಿ ಮುದ್ರಿಸುವಂತಿಲ್ಲ, ಒಂದು ವೇಳೆ ಯಾರಾದರೂ ಮುದ್ರಣ ಮಾಡಿಸಲು ಬಂದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಮುಖ್ಯವಾಗಿ ಮುದ್ರಿಸಿದ ಬ್ಯಾನರ್ ಅಥವಾ ಫೆಕ್ಸ್‌ನಲ್ಲಿ ಮುದ್ರಿಸುತ್ತಿರುವ ಮಾಲೀಕರ ಹೆಸರನ್ನು ನಮೂದಿಸಬೇಕು. ಇಲ್ಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ ಎಂದು ಎಚ್ಚರಿಸಿದರು. ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಫೆಕ್ಸ್ ಹಾಗೂ ಇತರೆ ಪ್ಲಾಸ್ಟಿಕ್ ಆಮಂತ್ರಣ ಪತ್ರ, ಪಿಎಸಿ ಬ್ಯಾನರ್‌ಗಳು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications