ಬಳ್ಳಾರಿ ಜಿಲ್ಲೆ ವಿಭಜನೆಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ವಿರೋಧ
ಬಳ್ಳಾರಿ, ಡಿಸೆಂಬರ್ 07: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಹಮಾಲಿ ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ. ನಾನಾ ಕನ್ನಡಪರ ಸಂಘಟನೆಗಳು ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಪ್ರತಿಭಟನಾ ಮೆರವಣಿಗೆಗೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ಮೆರವಣಿಗೆಗೆ ಹಮಾಲಿ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಬಳ್ಳಾರಿ ವಿಭಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ನಗರದ ನಗರೂರು ನಾರಾಯಣರಾವ್ ಉದ್ಯಾನವನದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ನಾನಾ ಕನ್ನಡಪರ ಸಂಘಟನೆಗಳ ಮುಖಂಡರಾದ ಸಿರಿಗೇರಿ ಪನ್ನರಾಜ, ಟಿ.ಜಿ.ವಿಠಲ, ಕೆ. ಎರಿಸ್ವಾಮಿ, ದರೂರು ಪುರುಷೋತ್ತಮಗೌಡ, ಬಂಡೇಗೌಡ, ಸಿದ್ಮಲ್ ಮಂಜುನಾಥ, ಮೀನಳ್ಳಿ ತಾಯಣ್ಣ, ಕುಡಿತಿನಿ ಶ್ರೀನಿವಾಸ ಸೇರಿದಂತೆ ಅನೇಕ ಕಾರ್ಯಕರ್ತ ಮುಖಂಡರು ಜಮಾಯಿಸಿ ಸಚಿವ ಆನಂದ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾರಾಯಣ್ ರಾವ್ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಂಗಳಮುಖಿಯರು ಪಾಲ್ಗೊಳ್ಳುವ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications