ಶಾಸಕ ಗಣೇಶ್ ಪಶ್ಚಾತ್ತಾಪ, ಆನಂದ್ ಸಿಂಗ್ ಬಳಿ ಕ್ಷಮೆ ಯಾಚನೆ
ಬಳ್ಳಾರಿ, ಏಪ್ರಿಲ್ 27: ಶಾಸಕ ಆನಂದ್ ಸಿಂಗ್ ಅವರ ಕಣ್ಣು ಊದಿ ವಿಕಾರವಾಗುವಂತೆ ಹೊಡೆದಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಜೈಲುವಾಸದ ಬಳಿಕ ತಪ್ಪಿನ ಅರಿವಾದಂತಿದೆ. ಇಂದು ಅವರು ಆನಂದ್ ಸಿಂಗ್ ಅವರ ಬಳಿ ಕ್ಷಮಾಪಣೆ ಕೋರಿದ್ದಾರೆ.
ಬಳ್ಳಾರಿ ಹೊಸಪೇಟೆಯ ಕೃಷ್ಣ ದೇವಾಲಯದಲ್ಲಿ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿಯಾಗಿದ್ದ ಕಂಪ್ಲಿ ಶಾಸಕ ಗಣೇಶ್ ಅವರು ಅವರ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಸ್ಥಳದಲ್ಲಿ ಹಾಜರಿದ್ದ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ ಅವರ ಬಳಿಯೂ ಕ್ಷಮೆಗೆ ಯಾಚಿಸಿದ್ದಾರೆ.
ಪೂರ್ವ ನಿರ್ಧಾರದಂತೆ ಗಣೇಶ್ ಅವರು ಕೃಷ್ಣ ದೇವಾಲಯಕ್ಕೆ ಇಂದು ಮಧ್ಯಾಹ್ನದ ವೇಳೆಗೆ ಹೋಗಿದ್ದರು, ಆನಂದ್ ಸಿಂಗ್ ಅವರು ತಮ್ಮ ತಂದೆಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು, ಅಲ್ಲಿ ಪ್ರಥ್ವಿರಾಜ್ ಸಿಂಗ್ ಅವರ ಕಾಲಿಗೆ ನಮಸ್ಕರಿಸಿದ ಗಣೇಶ್ ಅವರು ಆ ನಂತರ ತಂದೆ ಮಗನ ಬಳಿ ಕ್ಷಮೆ ಕೇಳಿದ್ದಾರೆ.
ಆಕಸ್ಮಿಕವಾಗಿ ತಪ್ಪು ನಡೆದಿದೆ, ಮನ್ನಿಸಿ, ಮತ್ತೆ ಎಂದೂ ಹೀಗಾಗದು ಎಂದು ಗಣೇಶ್ ಅವರು ದೀನರಾಗಿ ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಣೇಶ್ ಅವರು ಜೈಲಿನಿಂದ ಬಿಡುಗಡೆ ಆದ ಬಳಿಕ ಸಹ ಇದೇ ರೀತಿಯ ಸೌಮ್ಯ ಹೇಳಿಕೆಗಳನ್ನೇ ನೀಡುತ್ತಿದ್ದರು, ಅವರಿಗೂ ಸಹ ತಮ್ಮ ತಪ್ಪಿನ ಅರಿವಾಗಿದೆ ಎಂದು ಭಾಸವಾಗುತ್ತಿತ್ತು.

ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದಿದ್ದ ಹಲ್ಲೆ
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಜನವರಿ 19 ರಂದು ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದರು, ಆನಂದ್ ಸಿಂಗ್ ಅವರ ಕಣ್ಣಿಗೆ ತೀವ್ರ ಪೆಟ್ಟಾಗಿತ್ತು, ಆ ನಂತರ ಗಣೇಶ್ ಅವರು ತಲೆಮರೆಸಿಕೊಂಡಿದ್ದರು.

68 ದಿನ ಜೈಲುವಾಸ ಅನುಭವಿಸಿದ ಗಣೇಶ್
ಫೆಬ್ರವರಿ 20 ರಂದು ಗಣೇಶ್ ಅವರನ್ನು ಗುಜರಾತಿನ ನಗರವೊಂದರಲ್ಲಿ ಬಂಧಿಸಲಾಯಿತು, ಫೆಬ್ರವರಿ 21ಕ್ಕೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಅವರು ಮೂರು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರು ಸತತ 68 ದಿನಗಳ ಜೈಲುವಾಸ ಅನುಭವಿಸಿದ್ದಾರೆ. ಈ ನಡುವೆ ಅವರ ಕೆಪಿಸಿಸಿ ಸದಸ್ಯತ್ವ ರದ್ದು ಮಾಡಲಾಗಿದೆ.

ಮತ್ತೆ ಕಾಂಗ್ರೆಸ್ ಸೇರಲು ಗಣೇಶ್ ಕಸರತ್ತು?
ನ್ಯಾಯಾಲಯದಲ್ಲಿ ಪ್ರಕರಣವನ್ನು ಮೆದುಗೊಳಿಸಿಕೊಳ್ಳಲು ಮತ್ತು ಕಾಂಗ್ರೆಸ್ ಪಕ್ಷ ಹೇರಿರುವ ಅಮಾನತು ರದ್ದು ಪಡಿಸಿಕೊಳ್ಳಲು ಯತ್ನಿಸುತ್ತಿರುವ ಗಣೇಶ್ ಅವರು ಸಹಜವಾಗಿಯೇ ಆನಂದ್ ಸಿಂಗ್ ಅವರ ಬಳಿ ಸಂಧಾನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಗಣೇಶ್ ಅವರನ್ನು ಕ್ಷಮಿಸಿದ್ದಾರೆಯೇ ಆನಂದ್ ಸಿಂಗ್ ?
ಆನಂದ್ ಸಿಂಗ್ ಆಗಲಿ ಅವರ ತಂದೆಯವರಾಗಲಿ ಗಣೇಶ್ ಅವರ ಕ್ಷಮಾಪಣೆ ಮನವಿಯನ್ನು ಮನ್ನಿಸಿದ್ದಾರೋ ಇಲ್ಲವೋ ಎಂಬುದು ಈವರೆಗೆ ತಿಳಿದುಬಂದಿಲ್ಲ, ಹಿಂದೊಮ್ಮೆ ಈ ಬಗ್ಗೆ ಮಾತನಾಡಿದ್ದ ಆನಂದ್ ಸಿಂಗ್ ಅವರು, ತಾವು ಈ ಪ್ರಕರಣದಲ್ಲಿ ನಿಲವು ಬದಲಾಯಿಸುವುದಿಲ್ಲ ಎಂದಿದ್ದರು, ಆದರೆ ಇಂದು ಗಣೇಶ್ ಕರೆದ ಸಂಧಾನಕ್ಕೆ ಬಂದಿರುವುದು ಅವರು ನಿಲವು ಮೃದುವಾಗಿದೆ ಎಂದು ಅರಿವಾಗುತ್ತಿದೆ.












Click it and Unblock the Notifications