ಬಳ್ಳಾರಿಯಲ್ಲಿ ದಿಢೀರ್ ಬೆಳವಣಿಗೆ; ಬುಡಾ ಅಧ್ಯಕ್ಷರ ಬದಲಾವಣೆ
ಬಳ್ಳಾರಿ, ಜನವರಿ 28; ದಿಢೀರ್ ಬೆಳವಣಿಗೆಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡ) ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಕೆ. ಎ. ರಾಮಲಿಂಗಪ್ಪ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರ ಈ ಕುರಿತು ಆದೇಶವನ್ನು ಹೊರಡಿಸಿದೆ. 8 ತಿಂಗಳಿನಿಂದ ಅಧ್ಯಕ್ಷರಾಗಿದ್ದ ದಮ್ಮೂರ್ ಶೇಖರ್ ಅವರನ್ನು ದಿಢೀರ್ ಬದಲಾವಣೆ ಮಾಡಲಾಗಿದೆ. ಬಿಜೆಪಿ ಮುಖಂಡ ರಾಮಲಿಂಗಪ್ಪ ನೂತನ ಅಧ್ಯಕ್ಷರಾಗಿದ್ದಾರೆ.

ರಾಮಲಿಂಗಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ. ಎಸ್. ಈಶ್ವರಪ್ಪ ಅವರು ಸಂಬಂಧಿಯಾಗಿದ್ದಾರೆ. ದಮ್ಮೂರ್ ಶೇಖರ್ ರೆಡ್ಡಿ ಸಹೋದರರ ಆಪ್ತರಾಗಿದ್ದರು. ಅಧ್ಯಕ್ಷರ ಬದಲಾವಣೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕೆ. ಎ. ರಾಮಲಿಂಗಪ್ಪ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ. ಎಸ್. ಶಿವಕುಮಾರ ಸ್ವಾಮಿ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ಬಿಜೆಪಿ ಮುಖಂಡರಾಗಿರುವ ರಾಮಲಿಂಗಪ್ಪ ಸಚಿವ ಈಶ್ವರಪ್ಪ ಅವರ ಅಳಿಯ ಎಂಬ ಮಾಹಿತಿ ಸಿಕ್ಕಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೋಕಾ ರಸ್ತೆಯ ಕೆ.ಇ.ಬಿ. ಸರ್ಕಲ್‍ನಲ್ಲಿ ನಿರ್ಮಿಸಿದ್ದ ನೂತನ ಬಸ್ ನಿಲ್ದಾಣವನ್ನು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಬುಧವಾರ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಜೊತೆಗಿದ್ದರು.
ಬುಧವಾರ ಸಂಜೆ ಅಧ್ಯಕ್ಷರನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಿಢೀರ್ ಆದೇಶದಿಂದಾಗಿ ದಮ್ಮೂರು ಶೇಖರ್ ಅವರಿಗೆ ಹಿನ್ನಡೆ ಉಂಟಾಗಿದೆ.











Click it and Unblock the Notifications