ಬಳ್ಳಾರಿಯಲ್ಲಿ ಪ್ರಚಾರ ಮಾಡಲು ಕೋರ್ಟ್ ಮೊರೆ ಹೋದ ರೆಡ್ಡಿ, ಹೈಕಮಾಂಡ್ ಒಪ್ಪುತ್ತಾ?
ಬಳ್ಳಾರಿ, ಅಕ್ಟೋಬರ್ 24: ಬಳ್ಳಾರಿ ಲೋಕಸಭಾ ಉಪಚುನಾವಣೆ ರಣರಂಗವಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಪೂರ್ಣ ಶಕ್ತಿಯೊಂದಿಗೆ ಹೋರಾಟಕ್ಕೆ ಇಳಿದಿವೆ.
ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ಅವರ ನಡುವಿನ ವೈಯಕ್ತಿಕ ಪ್ರತಿಷ್ಠೆಯಾಗಿ ಬಳ್ಳಾರಿ ಚುನಾವಣಾ ಕಣ ಮಾರ್ಪಟ್ಟಿದೆ. ಆದರೆ ಶ್ರೀರಾಮುಲು ಅವರು ಬಿಜೆಪಿ ಪರವಾಗಿ ಒಂಟಿ ಹೋರಾಟಗಾರರಾಗಿದ್ದಾರಾ ಎಂಬ ಅನುಮಾನ ಸಹ ಮೂಡಿದೆ.
ಏಕೆಂದರೆ ಬಿಜೆಪಿಯ ಪ್ರಮುಖ ಮುಖಂಡರು ಪ್ರಚಾರಕ್ಕಾಗಿ ಬಳ್ಳಾರಿ ಕಡೆ ಇನ್ನೂ ತಲೆ ಹಾಕಿಲ್ಲ, ಆದರೆ ಕಾಂಗ್ರೆಸ್ ದೊಡ್ಡ ತಂಡದೊಂದಿಗೆ ಬಳ್ಳಾರಿ ಮೇಲೆ ದಾಂಗುಡಿ ಇಟ್ಟಿದೆ. ಸಿದ್ದರಾಮಯ್ಯ ಅವರಂತೂ ರಾಮುಲು ಮೇಲೆ ಟೀಕಾಸ್ತ್ರಗಳನ್ನು ಹೂಡತ್ತಲೇ ಇದ್ದಾರೆ.
ಇಂತಹಾ ವಿಷಮ ಪರಿಸ್ಥಿತಿಯಲ್ಲಿ ಗೆಳೆಯನ ನೆರವಿಗೆ ಬಳ್ಳಾರಿ ಗಣಿ ಧಣಿ ಜನಾರ್ಧನ ರೆಡ್ಡಿ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜನಾರ್ಧನ ರೆಡ್ಡಿ ಅವರು ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಮುಲು ಅವರ ತಂಗಿ ಶಾಂತಾ ಅವರ ಪರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.

ಬಳ್ಳಾರಿಗೆ ಪ್ರವೇಶಿಸದಂತೆ ತಡೆ
ಅಕ್ರಮ ಗಣಿಗಾರಿಕೆ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಗಾಲಿ ಜನಾರ್ಧನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಆದರೆ ಪ್ರಚಾರಕ್ಕೆ ಅನುಮತಿ ನೀಡಬೇಕು ಎಂದು ಜನಾರ್ಧನ ರೆಡ್ಡಿ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಷರತ್ತುಗಳನ್ನು ವಿಧಿಸಿ ಅನುಮತಿ ಕೊಡುವ ಸಾಧ್ಯತೆ
ಈ ಹಿಂದೆ ಸಹ ಮಗಳ ಮದುವೆ ಸಮಯದಲ್ಲಿ ಷರತ್ತುಗಳನ್ನು ವಿಧಿಸಿ ಬಳ್ಳಾರಿಗೆ ಪ್ರವೇಶಿಸಲು ಜನಾರ್ಧನ ರೆಡ್ಡಿ ಅವರಿಗೆ ನ್ಯಾಯಾಲಯ ಅವಕಾಶ ನೀಡಿತ್ತು. ಈಗಲೂ ಸಹ ನ್ಯಾಯಾಲಯವು ಷರತ್ತುಗಳನ್ನು ವಿಧಿಸಿ ಪ್ರಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಹೈಕಮಾಂಡ್‌ನಿಂದಲೂ ಒಪ್ಪಿಗೆ?
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಆರಂಭದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಜನಾರ್ಧನ ರೆಡ್ಡಿ ಆನಂತರ ಹೈಕಮಾಂಡ್ ಒತ್ತಡಕ್ಕೆ ಮಣಿದು ಪ್ರಚಾರದಿಂದ ಹಿಂದುಳಿದಿದ್ದರು ಆದರೆ ತೆರೆಯ ಹಿಂದೆ ಉಳಿದು ಬಿಜೆಪಿ ಪರವಾಗಿ ಚುನಾವಣೆಗೆ ಸಹಾಯ ಮಾಡಿದ್ದರು.

ಯಡಿಯೂರಪ್ಪ ಒಪ್ಪಿಗೆ ಇದೆ
ಬಿಜೆಪಿ ರಾಜ್ಯ ನಾಯಕರು ಹಲವರಿಗೆ ಜನಾರ್ಧನ ರೆಡ್ಡಿ ಅವರು ಬಿಜೆಪಿ ಪರ ಬಹಿರಂಗವಾಗಿ ಅಖಾಡಕ್ಕೆ ಇಳಿಯುವುದಕ್ಕೆ ಒಪ್ಪಿಗೆ ಇದೆ. ವಿಶೇಷವಾಗಿ ಯಡಿಯೂರಪ್ಪ ಅವರೇ ಜನಾರ್ಧನ ರೆಡ್ಡಿ ಅವರ ಪರ ಇದ್ದಾರೆ ಆದರೆ ಹೈಕಮಾಂಡ್ ಇದಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ.

ವಿವಾದಿತ ನಾಯಕರು ಪ್ರಚಾರದಿಂದ ದೂರ
ಗಣಿ ಲೂಟಿ ಆರೋಪ ಹೊಂದಿರುವ ಜನಾರ್ಧನ ರೆಡ್ಡಿ ಪ್ರಚಾರಕ್ಕೆ ಬಂದರೆ ವಿರೋಧ ಪಕ್ಷಗಳಿಗೆ ಟೀಕೆಗೆ ಆಹಾರವಾಗುತ್ತದೆ ಎಂಬ ಕಾರಣದಿಂದ ಜನಾರ್ಧನ ರೆಡ್ಡಿ ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕೆ ತಡೆ ಒಡ್ಡಿದೆ. ಅವರೊಬ್ಬರೆ ಅಲ್ಲದೆ ಬಿಜೆಪಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರನ್ನು ಸಹ ಪ್ರಚಾರದಿಂದ ದೂರ ಉಳಿಸಲಾಗಿದೆ.

ಪ್ರಚಾರದಿಂದ ಬದಲಾವಣೆ ಸಾಧ್ಯವೆ?
ಬಿಜೆಪಿಯ ಟಾಪ್ ನಾಯಕರು ಎನಿಸಿಕೊಂಡ ಹಲವರು ಬಳ್ಳಾರಿಗೆ ಬಂದಿಲ್ಲ ಇದು ಶ್ರೀರಾಮುಲು ಅವರ ಶಕ್ತಿಯನ್ನು ಕಡಿಮೆಗೊಳಿಸಿದೆ. ಆದರೆ ಜನಾರ್ಧನ ರೆಡ್ಡಿ ಅಖಾಡಕ್ಕೆ ಇಳಿದರೆ ಅದು ರಾಮುಲು ಪಾಲಿಗೆ ಅತಿ ದೊಡ್ಡ ಶಕ್ತಿಯಾಗುತ್ತದೆ. ರೆಡ್ಡಿ ಅವರು ಬಳ್ಳಾರಿಯ ಪ್ರಭಾವಿ ರಾಜಕಾರಣಿ ಆಗಿದ್ದು ಬಿಜೆಪಿಯನ್ನು ಗೆಲ್ಲಿಸುವ ಶಕ್ತಿ ಅವರಿಗಿದೆ ಎನ್ನಲಾಗಿದೆ.












Click it and Unblock the Notifications