1 ಲಕ್ಷ ಮತಗಳ ಅಂತರದಿಂದ ಶ್ರೀರಾಮುಲು ಗೆಲ್ಲಿಸಿ
ಬಳ್ಳಾರಿ, ಏ.15 : ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪ್ರಚಾರ ಬಿರುಸಿನಿಂದ ಸಾಗಿದೆ. ಸೋಮವಾರ ಮುಸ್ಲಿಂ ಧರ್ಮಪ್ರಚಾರಕ ಮೌಲಾನಾ ಅಬುತಾಲೀಮ್ ಮುತಾಲಿಕ್ ರೆಹಮಾನ್ ಸಾಬ್ ಶ್ರೀರಾಮುಲು ಪರವಾಗಿ ಪ್ರಚಾರ ನಡೆಸಿ, ರಾಮುಲು ಅವರನ್ನು ಎಲ್ಲರೂ ಸೇರಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಜನರಿಗೆ ಮನವಿ ಮಾಡಿದರು.
ಕೌಲ್ ಬಜಾರಿನ 9ನೇ ವಾರ್ಡಿನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ರೆಹಮಾನ್ ಸಾಬ್, ಸೌದಿ ಅರೇಬಿಯಾ ಪೆಟ್ರೋಲ್‍ಗೆ, ಅಮೇರಿಕಾ ಯುದ್ಧ ಸಾಮಾಗ್ರಿಗಳಿಗೆ, ಚೈನಾ, ಜಪಾನ್ ತಂತ್ರಜ್ಞಾನಗಳಿಗೆ ಹೆಸರು ಪಡೆದಿದೆ. ಭಾರತ ಹಿಂದು-ಮುಸ್ಲಿಂ ಪ್ರೀತಿ, ಧಾರ್ಮಿಕ ಸಾಮರಸ್ಯದಿಂದ ಪ್ರಸಿದ್ಧಿ ಪಡೆದಿದೆ ಎಂದು ಬಣ್ಣಿಸಿದರು.

ನಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಿಂದು ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದ ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ, ಕೇಂದ್ರದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ರೆಹಮಾನ್ ಹೇಳಿದರು. ಆದ್ದರಿಂದ ಎಲ್ಲಾ ಧರ್ಮದವರು ಶ್ರೀರಾಮುಲು ಅವರನ್ನು ಬೆಂಬಿಸಬೇಕು ಎಂದರು. [ಚಿತ್ರಗಳಲ್ಲಿ ನೋಡಿ : ಬಳ್ಳಾರಿಯಲ್ಲಿ ರಾಜನಾಥ್ ಸಿಂಗ್]
ನಮ್ಮ ಅಭ್ಯರ್ಥಿ ಶ್ರೀರಾಮುಲು ಕುರ್ಚಿಯ ಹಿಂದೆ ಎಂದೂ ಓಡುವುದಿಲ್ಲ. ಕುರ್ಚಿಯೇ ಅವರ ಹಿಂದೆ ಓಡಿ ಬರುತ್ತದೆ. ಬಳ್ಳಾರಿಯ ಜನತೆ ಪಕ್ಷ ನೋಡಬೇಡಿ. ವ್ಯಕ್ತಿಯನ್ನು ನೋಡಿ. ಬಡವರು, ದಲಿತರು ಸೇರಿದಂತೆ ಎಲ್ಲ ತಳಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಶ್ರೀರಾಮುಲು ಅವರಿಗೆ ನಿಮ್ಮ ಮತನೀಡಿ ಎಂದು ಮನವಿ ಮಾಡಿದರು.
ಜನರ ಜೊತೆ ಬೆರೆಯುವ ಸಾಮಾನ್ಯ ವ್ಯಕ್ತಿ ನಮ್ಮ ಶ್ರೀರಾಮುಲು ಅವರಿಗೆ ಮತನೀಡಿ ಆರಿಸಿ ಕಳುಹಿಸಿದರೆ, ಬಳ್ಳಾರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾರೆ. ಜನರು ರಾಮುಲು ಅವರಿಗೆ ಬೆಂಬಲ ನೀಡಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕಾಗಿದೆ. ಆದ್ದರಿಂದ ಎಲ್ಲರೂ ಬಿಜೆಪಿಗೆ ಮತ ನೀಡಿದ ಎಂದು ರೆಹಮಾನ್ ಕರೆ ನೀಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು, ಬಿಜೆಪಿ ಮುಖಂಡರಾದ ಎಸ್ ಗುರುಲಿಂಗನಗೌಡ, ಕೆಎ ರಾಮಲಿಂಗಪ್ಪ, ಮುರಾರಿಗೌಡ, ಹೆಚ್ ಹನುಮಂತಪ್ಪ, ಡಿ ವಿನೋದ್ ಕುಮಾರ್, ಸತೀಶ್ ಚಕ್ರವರ್ತಿ, ಗೋವಿಂದರಾಜುಲು, ಶಿವರೆಡ್ಡಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications