Get Updates
Get notified of breaking news, exclusive insights, and must-see stories!

ವಿಜಯನಗರ ಜಿಲ್ಲೆ ಉದ್ಘಾಟನೆ; ವಿಶೇಷತೆಗಳನ್ನು ತಿಳಿಯಿರಿ

ಬಳ್ಳಾರಿ, ಸೆಪ್ಟೆಂಬರ್ 30: ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಿದ್ದರು. ಅಕ್ಟೋಬರ್ 2ರಂದು ಅಧಿಕೃತವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ.

ಅಕ್ಟೋಬರ್ 2 ಮತ್ತು 3ರಂದುದ ನಡೆಯುವ ಕಾರ್ಯಕ್ರಮಗಳ ಕುರಿತು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮತ್ತು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಮಾಹಿತಿ ನೀಡಿದ್ದಾರೆ.

ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಎರಡು ದಿನಗಳ ಕಾಲ ನಡೆಯಲಿದೆ. ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 2ರಂದು ಸಂಜೆ 6ಕ್ಕೆ ವಿಜಯನಗರ ಜಿಲ್ಲೆಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ 464 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗುತ್ತಿದೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

"ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಜಯನಗರ ಜಿಲ್ಲೆ ರಚನೆ ಮತ್ತು ಘೋಷಣೆಗೆ ಕಾರಣೀಕರ್ತರಾದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಹೋರಾಟಕ್ಕೆ ಕೈಜೋಡಿಸಿದ ಮಠಾಧೀಶರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು, ಸಂಸದರು ಮತ್ತು ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆ" ಎಂದು ಆನಂದ್ ಸಿಂಗ್ ತಿಳಿಸಿದರು.

ಪ್ರವಾಸೋದ್ಯಮ ಆರಂಭಕ್ಕೂ ಉತ್ತೇಜನ

ಪ್ರವಾಸೋದ್ಯಮ ಆರಂಭಕ್ಕೂ ಉತ್ತೇಜನ

ವಿಜಯನಗರ ಜಿಲ್ಲೆ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ಸ್ಮರಣೀಯವಾಗಿ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿಜಯನಗರ ಜಿಲ್ಲೆಯ ಉದ್ಘಾಟನೆಯ ಜೊತೆಗೆ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರಗೊಳಿಸಲಾಗುತ್ತದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಜ್ಯದ ಇತರೆಡೆ ಇರುವ ಪ್ರವಾಸಿ ಸ್ಥಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚುರಪಡಿಸುವ ಉದ್ದೇಶದ ಹೊಂದಲಾಗಿದೆ. ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಕಲಾವಿದರು ಮತ್ತು ತಂತ್ರಜ್ಞರಿಗೆ ಹಾಗೂ ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವವರಿಗೆ ಈ ಕಾರ್ಯಕ್ರಮದ ಮೂಲಕ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ಕೊಡಲಾಗುತ್ತಿದೆ.

ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದ್ದು, 180*70 ಅಡಿ ಬ್ಯಾಕ್‍ಡ್ರಾಪ್‍ಇದೆ. ಮಳೆ,ಗಾಳಿ ಮತ್ತು ಬೆಂಕಿ ತಗುಲಿದರೂ ಏನು ಆಗದ ಜರ್ಮನ್ ತಂತ್ರಜ್ಞಾನ ಹೊಂದಿರುವ ಮೇಲು ಹೊದಿಕೆಯನ್ನು ಹಾಕಲಾಗುತ್ತಿದೆ. ವೇದಿಕೆ ಹಿಂಭಾಗ ವಿರೂಪಾಕ್ಷ ಗೋಪುರ, ಕಲ್ಲಿನರಥ ಮತ್ತು ಉಗ್ರನರಸಿಂಹ ವಿನ್ಯಾಸ ಸಿದ್ದಪಡಿಸಲಾಗುತ್ತಿದೆ. ವೇದಿಕೆ ಕಾರ್ಯಕ್ರಮದಲ್ಲಿ ನೂತನ ವಿಜಯನಗರ ಜಿಲ್ಲೆಯಲ್ಲಿ ಕಚೇರಿಗಳ ಸ್ಥಾಪನೆ ಕುರಿತು ಕೆಲ ಸರಕಾರಿ ಆದೇಶಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಸರಕಾರಿ ಆದೇಶಗಳು ಬಿಡುಗಡೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ.

ಕಲಾ ತಂಡಗಳ ಮೆರವಣಿಗೆ

ಕಲಾ ತಂಡಗಳ ಮೆರವಣಿಗೆ

ಜಿಲ್ಲೆ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜ್ಯೋತಿಗಳನ್ನು ಹೊತ್ತುತರಲಾಗುತ್ತಿದೆ. ನಗರದ ಧ್ವಜದ ಕಟ್ಟೆ ಮುಂಭಾಗ (ಶಾನ್‍ಬೋಗ ವೃತ್ತ)ದಲ್ಲಿ ನಿರ್ಮಿಸಲಾಗಿರುವ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಗುತ್ತದೆ. ನಾಡಿನ ವೈವಿಧ್ಯಮಯ ಕಲೆ ಅನಾವರಣಗೊಳ್ಳಲಿದ್ದು, ಅಕ್ಟೋಬರ್ 2ರಂದು ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ. ಸ್ಥಳೀಯ ಕಲಾವಿದರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 80 ಕಲಾತಂಡಗಳ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪೂಜಾ ಕುಣಿತ, ಪಟಕುಣಿತ, ಗೊಂಬೆಕುಣಿತ, ಚಿಟ್ಟೆ ಮೇಳ, ಚಂಡಿವಾದ್ಯ, ಮಹಿಳಾ ಕಾಳಿ ಕುಣಿತ, ಮಹಿಳಾ ವೀರಗಾಸೆ, ನಗಾರಿ ವಾದ್ಯ, ಕಂಸಾಳೆ, ಜಗ್ಗಲಗಿ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಹುಲಿವೇಷ, ಝಾಂಜ್ ಮೇಳ, ನವಿಲು ಕುಣಿತ, ತಾಷರಂಡೋಲ್, ಹಲಗೆ ವಾದನ, ವೀರಗಾಸೆ, ನಾದಸ್ವರ ವಾದನ, ಕಹಳೆ ವಾದನ, ಹಗಲುವೇಷಗಾರಿಕೆ, ಬೇಡರ ವೇಷ, ಉರುಮೆ ವಾದ್ಯ, ಕೋಲಾಟ, ಗೊರವರಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.

ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿಯ ಹಾಗೂ ಇನ್ನೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್ (ಆಸ್ಥಾನ ಕವಿಗಳು) ವಿದ್ಯಾರಣ್ಯ ಶ್ರೀಗಳು ಹಾಗೂ ಇನ್ನೀತರ ಪ್ರಮುಖರ ವೇಷಧಾರಿಗಳಿರಲಿದ್ದಾರೆ.

ಮುಖ್ಯಮಂತ್ರಿಗಳಿಗೆ ಭವ್ಯ ಸ್ವಾಗತ

ಮುಖ್ಯಮಂತ್ರಿಗಳಿಗೆ ಭವ್ಯ ಸ್ವಾಗತ

ಅಕ್ಟೋಬರ್ 2ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸಲಿದ್ದಾರೆ. ಹಕ್ಕ-ಬುಕ್ಕರ ಮಹಾದ್ವಾರದ ಮೂಲಕ ಆಗಮಿಸುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಿಗೆ ಭವ್ಯವಾದ ಸ್ವಾಗತವನ್ನು ಜಿಲ್ಲಾಡಳಿತದಿಂದ ಕೋರಲಾಗುತ್ತದೆ ಗಾಂಧಿ ಜಯಂತಿ ಮತ್ತು ಲಾಲ್‍ಬಹುದ್ದೂರ್ ಶಾಸ್ತ್ರೀ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ. ಲಾಲ್ ಬಹುದ್ದೂರ್ ಶಾಸ್ತ್ರೀ ಭಾವಚಿತ್ರಗಳಿಗೆ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ. ಸರ್ವಧರ್ಮಿಯ ಪ್ರಾರ್ಥನೆಯನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಬಸವರಾಜ ಬೊಮ್ಮಾಯಿ ಜಿಲ್ಲೆ ಉದ್ಘಾಟಿಸುವುದರ ಜೊತೆಗೆ ಇದೇ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಹೊಸಪೇಟೆ ನಗರದ ಹಂಪಿ ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ ( ಬೈಪಾಸ್ ) ಚತುಷ್ಪಥರಸ್ತೆ ನಿರ್ಮಾಣ 11 ಕೋಟಿ ರೂ., ಹೊಸಪೇಟೆ ನಗರದಲ್ಲಿ 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ 11 ಕೋಟಿ ರೂ., ಹೊಸಪೇಟೆಯ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾಮಗಾರಿ 10 ಕೋಟಿ ರೂ., ಹೊಸಪೇಟೆ ತಾಲೂಕು ಹಂಪಿಯಿಂದ ವಯಾ ಕಮಲಾಪುರ ಪಾಪಿನಾಯಕನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ 10ಕೋಟಿ ರೂ., ಹೊಸಪೇಟೆ ನಗರದಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆ 09 ಕೋಟಿ ರೂ., ಹೊಸಪೇಟೆ ತಾಲೂಕು ವೆಂಕಟಾಪುರದಿಂದ ಪಂಪಾ ವಿದ್ಯಾಪೀಠ ವಿಜಯನಗರ ಕ್ಷೇತ್ರದ ಕೊನೆಯ ಭಾಗದವರೆಗೆ ರಸ್ತೆ ಅಭಿವೃದ್ಧಿ 8.25 ಕೋಟಿ ರೂ. ಕಾಮಗಾರಿಗಳು ಸೇರಿದಂತೆ 24 ಕಾಮಗಾರಿಗಳು ರೂ. 99.66 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಸದರಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಲಿದ್ದಾರೆ.

ಖ್ಯಾತ ಕಲಾವಿದರ ಸಮಾಗಮ

ಖ್ಯಾತ ಕಲಾವಿದರ ಸಮಾಗಮ

ಅಕ್ಟೋಬರ್ 2 ಮತ್ತು 3ರಂದು ಎರಡು ದಿನಗಳ ಕಾಲ ನಡೆಯಲಿರುವ ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಸಮಾಗಮವಾಗಲಿದೆ. ಅ.2 ರಂದು ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ ವೈದ್ಯ ಮತ್ತು ಪ್ರವೀಣಗೋಡ್ಖಿಂಡಿ ಅವರು ರಾತ್ರಿ 10ಕ್ಕೆ ವಾದ್ಯ ಸಂಗೀತ ರಸದೌತಣವನ್ನು ಸಂಗೀತ ಪ್ರೇಮಿಗಳಿಗೆ ಉಣಬಡಿಸಲಿದ್ದಾರೆ. ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಅನನ್ಯಭಟ್ ಲಘುಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಪ್ರಸ್ತುತ ಪಡಿಸಲಿದ್ದಾರೆ. ನಿರುಪಮ ಮತ್ತು ರಾಜೇಂದ್ರ ಅವರ ಅಭಿನವ ಡಾನ್ಸ್ ಕಂಪನಿ ವತಿಯಿಂದ ವಿಜಯನಗರ ವೈಭವ-ನೃತ್ಯರೂಪಕ ಪ್ರಸ್ತುತ ಪಡಿಸಲಾಗುತ್ತದೆ. ಎಂ. ಡಿ. ಪಲ್ಲವಿ ಅವರು ದೇಶಭಕ್ತಿ ಗೀತೆಗಳು ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸವಿತಾ ಅವರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಅಕ್ಟೋಬರ್ 3ರಂದು ಕನ್ನೇ ಅದಿರಿಂದಿ ಹಾಡು ಖ್ಯಾತಿಯ ಗಾಯಕಿ ಮಂಗ್ಲಿ ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಖ್ಯಾತ ಗಾಯಕರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ. ಖ್ಯಾತ ಗಾಯಕರಾದ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದೆ. ಲಕ್ಷ್ಮೀದುಬೆ ಮತ್ತು ತಂಡದವರು ದೇಶಭಕ್ತಿ ಮತ್ತು ಆಶು ಗೀತೆಗಳನ್ನು ಹಾಡಲಿದ್ದಾರೆ.

ಹಬ್ಬದ ರೀತಿಯಲ್ಲಿ ಆಚರಣೆ

ಹಬ್ಬದ ರೀತಿಯಲ್ಲಿ ಆಚರಣೆ

ವಿಜಯನಗರ ಉತ್ಸವವನ್ನು ಜಿಲ್ಲೆಯ ಜನರು ಮನೆಯ ಹಬ್ಬದಂತೆ ಆಚರಿಸಬೇಕು. ವಿಜಯನಗರ ಜಿಲ್ಲೆಯ ಉದ್ಘಾಟನಾ ದಿನ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ಎದುರು ರಂಗೋಲಿ ಹಾಕಬೇಕು ಮತ್ತು ಸಿಹಿ-ತಿಂಡಿಗಳನ್ನು ಮಾಡಬೇಕು ಎಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ.

ಹೊಸಪೇಟೆ ನಗರ ಸಭೆಯಿಂದ ಇಡೀ ನಗರವನ್ನು ವಿದ್ಯುತ್ ದೀಪಾಲಂಕರಗಳಿಂದ ಅಲಂಕರಿಸಲಾಗುತ್ತದೆ ಮತ್ತು ಉದ್ಯಮಿಗಳು ತಮ್ಮ ವಾಣಿಜ್ಯ ಮಳಿಗೆಗಳನ್ನು ಅಕ್ಟೋಬರ್ 2 ಮತ್ತು 3ರಂದು ದೀಪಾಲಂಕಾರ ಮಾಡಲಿದ್ದಾರೆ. ಕಾರ್ಯಕ್ರಮವನ್ನು ನಗರದ ಮೂರು ಕಡೆ ಬೃಹತ್ ಎಲ್‍ಇಡಿ ಪರದೆ ಮೂಲಕ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ವಿಶಾಲ ಮೈದಾನದಲ್ಲಿ ಹಾಕಲಾಗಿರುವ ಎಲ್‍ಇಡಿ ಪರದೆಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಇದರ ಜೊತೆಗೆ ವಿಜಯನಗರ ಉತ್ಸವದ ಕಾರ್ಯಕ್ರಮವನ್ನು ಯೂಟ್ಯೂಬ್ ಲಿಂಕ್ ಮತ್ತು ಫೇಸ್‍ಬುಕ್ ಲಿಂಕ್ ಮೂಲಕವೂ ಪ್ರಸಾರ ಮಾಡಲಾಗುತ್ತಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಹೊರಗಡೆ ಬರದೇ ಮನೆಯಲ್ಲಿಯೇ ಕುಳಿತುಕೊಂಡು ಯೂಟ್ಯೂಬ್ ಮತ್ತು ಫೇಸ್‍ಬುಕ್ ಲಿಂಕ್ ಮೂಲಕ ನೋಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮತ್ತು ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮುಂಚೆ ಆಗಮಿಸಿ ಸಾಮಾಜಿಕ ಅಂತರ ಪಾಲಿಸಿಕೊಂಡು ಕುಳಿತುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವಿಜಯನಗರ ಉತ್ಸವಕ್ಕೆ 4 ಕೋಟಿ ಬಿಡುಗಡೆ

ವಿಜಯನಗರ ಉತ್ಸವಕ್ಕೆ 4 ಕೋಟಿ ಬಿಡುಗಡೆ

ವಿಜಯನಗರ ಉತ್ಸವಕ್ಕೆ 4 ಕೋಟಿ ರೂ.ಅನುದಾನವನ್ನು ಸರಕಾರ (ಪ್ರವಾಸೋದ್ಯಮ ಇಲಾಖೆ) ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿಯೇ ವೇದಿಕೆ ನಿರ್ಮಾಣ, ಕಲಾವಿದರ ಸಂಭಾವನೆ, ವಾಸ್ತವ್ಯ, ಸಾರಿಗೆ ವೆಚ್ಚ ಸೇರಿದಂತೆ ಎಲ್ಲ ರೀತಿಯ ವೆಚ್ಚಗಳನ್ನು ಭರಿಸಲಾಗುತ್ತಿದೆ. ಸರಕಾರದಿಂದ ಬಿಡುಗಡೆ ಮಾಡಲಾಗಿರುವ ಅನುದಾನ ಮತ್ತು ವೆಚ್ಚವನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದ್ದು, ನಂತರ ಆಡಿಟ್ ಮಾಡಿಸಲಾಗುವುದು ಎಂದು ಅನಿರುದ್ಧ ಶ್ರವಣ್ ಹೇಳಿದರು.

ಪ್ರಧಾನ ವೇದಿಕೆ ಮುಂಭಾಗ ಕಾರ್ಯಕ್ರಮ ವೀಕ್ಷಿಸಲು 2 ಸಾವಿರ ಆಸನಗಳನ್ನು ಹಾಕಲಾಗಿದೆ. ವಿಐಪಿ ಮತ್ತು ವಿವಿಐಪಿಗಳಿಗೆ ಪಾಸ್ ವಿತರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಈ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.

ಈ ಜಿಲ್ಲೆಗೆ ಪ್ರವಾಸೋದ್ಯಮವೇ ಬೆನ್ನುಲುಭಾಗಬೇಕು ಮುಂದಿನ ದಿನಗಳಲ್ಲಿ ಎಂಬ ದೃಷ್ಟಿಯಿಂದ ಈ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+