ರಾತ್ರೋರಾತ್ರಿ ಪಕ್ಷಾಂತರ ಮಾಡಿ ಚುನಾವಣೆಗೆ ನಿಂತ ಮಾಜಿ ಶಾಸಕನಿಗೆ ಸಿಕ್ಕಿದ್ದು ನೋಟಾಗಿಂತ ಕಡಿಮೆ ಮತ
ಮತದಾರ ಮನಸ್ಸು ಮಾಡಿದ್ರೆ ಯಾರನ್ನು ಬೇಕಾದ್ರು ಹೀರೋ ಮಾಡಬಹುದು, ಅದೇ ಜನ ತಿರುಗಿ ಬಿದ್ರೆ ಎಂತಹ ಹೀರೋ ಆದ್ರು ಝೀರೋ ಆಗಬಹುದು ಎನ್ನುವದನ್ನು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ತೋರಿಸಿಕೊಟ್ಟಿದ್ದಾರೆ. ಗೆದ್ದೇ ಗೆಲ್ತೀವಿ ಎಂದು ಬೀಗುತ್ತಿದ್ದ ಎಷ್ಟೋ ಜನ ಈ ಬಾರಿ ಮಣ್ಣು ಮುಕ್ಕಿದ್ದಾರೆ. ಹೆಸರೇ ಕೇಳದ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ಇನ್ನು ಮಾಜಿ ಶಾಸಕರೊಬ್ಬರು ರಾತ್ರೋ ರಾತ್ರಿ ಪಕ್ಷ ಬದಲಾವಣೆ ಮಾಡಿ ಸ್ಪರ್ಧೆ ಮಾಡಿದ್ದು, ಅವರಿಗೆ ಜನ ಕ್ಯಾರೆ ಅಂದಿಲ್ಲ, ಇದಕ್ಕಿಂತ ಅಚ್ಚರಿ ಎಂದರೆ ಒಬ್ಬ ಮಾಜಿ ಶಾಸಕ ನೋಟಾಗಿಂತ ಕಡಿಮೆ ಮತ ಪಡೆದಿರುವುದು. ಹೌದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರ ಇಂತಹ ಅಚ್ಚರಿಯ ತೀರ್ಪು ಕೊಟ್ಟಿದ್ದಾನೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಅನಿಲ್ ಲಾಡ್, ಟಿಕೆಟ್ ಸಿಗದ ಕಾರಣ ರಾತ್ರೋ ರಾತ್ರಿ ಜೆಡಿಎಸ್‌ಗೆ ಸೇರ್ಪಡೆಯಾಗಿ ಟಿಕೆಟ್ ಪಡೆದುಕೊಂಡಿದ್ದರು. ಬೇರೆ ಅಭ್ಯರ್ಥಿಗೆ ಅದಾಗಲೆ ಟಿಕೆಟ್ ಘೋಷಣೆ ಮಾಡಿದ್ದರೂ ಅದನ್ನು ತಪ್ಪಿಸಿ ಅನಿಲ್ ಲಾಡ್‌ಗೆ ಬಿ ಫಾರಂ ನೀಡಲಾಗಿತ್ತು, ಬಿಜೆಪಿ, ಕಾಂಗ್ರೆಸ್‌ಗೆ ಬಲಿಷ್ಠ ಪೈಪೋಟಿ ನೀಡ್ತೇನೆ ಅಂದುಕೊಂಡಿದ್ದ ಅನಿಲ್ ಲಾಡ್‌ಗೆ ದೊಡ್ಡ ಶಾಕ್ ಎದುರಾಗಿದೆ.
ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಅನಿಲ್ ಲಾಡ್ ಈ ಬಾರಿ 610 ಮತಗಳನ್ನು ಪಡೆದಿದ್ದರೆ, ನೋಟಾಗೆ 983 ಮತಗಳು ಬಿದ್ದಿವೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ 86440 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣ 48577 ಮತ ಪಡೆದು 2ನೇ ಸ್ಥಾನ ಪಡೆದರೆ, ಬಿಜೆಪಿಯ ಸೋಮಶೇಖರ ರೆಡ್ಡಿ 37155 ಮತಗಳನ್ನು ಪಡೆದಿದ್ದಾರೆ.
ಇದೇ ಅನಿಲ್ ಲಾಡ್ 2018ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾಗ ಬರೋಬ್ಬರಿ 60,434 ಮತಗಳನ್ನು ಪಡೆದುಕೊಂಡಿದ್ದರು. ಆ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮೊಹಮದ್ ಇಕ್ಬಾಲ್ ಹೊತ್ತೂರ್ 6255 ಮತಗಳನ್ನು ಪಡೆದುಕೊಂಡಿದ್ದರು. ಕಳೆದ ಬಾರಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಅನಿಲ್ ಲಾಡ್ 52098 ಮತಗಳನ್ನು ಪಡೆಯುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಅನಿಲ್ ಲಾಡ್ ಸೋಮಶೇಖರ ರೆಡ್ಡಿಗೆ ಭಾರಿ ಪೈಪೋಟಿ ನೀಡಿದ್ದರು, ಸೋಮಶೇಖರ ರೆಡ್ಡಿ 54,831 ಮತಗಳನ್ನು ಪಡೆದಿದ್ದರೆ, ಅನಿಲ್ ಲಾಡ್ 53,809 ಮತಗಳನ್ನು ಪಡೆಯುವ ಮೂಲಕ ಕೇವಲ 1022 ಮತಗಳಲ್ಲಿ ಸೋಲನುಭವಿಸಿದ್ದರು.
ಕ್ಷೇತ್ರದಲ್ಲಿ ಯಾವ ಪ್ರಭಾವವನ್ನೇ ಉಳಿಸಿಕೊಂಡಿಲ್ವಾ?
ಶಾಸಕನಾಗಿ ಆಯ್ಕೆಯಾಗಿದ್ದವರು, ಕಳೆದ ಚುನಾವಣೆಯಲ್ಲಿ 60,434 ಮತಗಳನ್ನು ಪಡೆದುಕೊಂಡವರು 5 ವರ್ಷಗಳ ನಡೆದ ಮುಂದಿನ ಚುನಾವಣೆಯಲ್ಲಿ ಕೇವಲ 602 ಮತಗಳನ್ನು ಪಡೆಯುತ್ತಾರೆ ಎಂದರೆ ಅದೊಂದು ಅಚ್ಚರಿಯೇ ಸರಿ. ಅನಿಲ್ ಲಾಡ್ ಅವರಿಗೆ ಇದ್ದ ವೈಯಕ್ತಿಕ ವರ್ಚಸ್ಸು ಇಷ್ಟೇನಾ ಎಂದು ಹಲವು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಜೆಡಿಎಸ್ ಅಭ್ಯರ್ಥಿ ಕಳೆದ ಬಾರಿ 6 ಸಾವಿರಕ್ಕಿಂತ ಹೆಚ್ಚಿನ ಮತ ಪಡೆದಿದ್ದರು, ಈ ಬಾರಿ ಅಲ್ಲಾಭಕ್ಷ ಅಲಿಯಾಸ್ ಮುನ್ನಾ ಎನ್ನುವವರಿಗೆ ಟಿಕೆಟ್ ಘೋಷಣೆ ಮಾಡಿದ್ದರು, ಅವರಿಗೆ ತಪ್ಪಿಸಿ ಕೊನೆ ಕ್ಷಣದಲ್ಲಿ ಅನಿಲ್ ಲಾಡ್‌ಗೆ ಮಣೆ ಹಾಕಲಾಯಿತು. ಆದರೆ ಅದರಿಂದ ಜೆಡಿಎಸ್‌ಗೆ ನಷ್ಟವಾಗಿದೆ ಎನ್ನುವುದಂತೂ ಈಗ ಸ್ಪಷ್ಟವಾಗಿದೆ.












Click it and Unblock the Notifications