ಆನಂದ್ ಸಿಂಗ್ ವಿರುದ್ಧ ಅಕ್ರಮ ಜಮೀನು ಖರೀದಿ ಆರೋಪ: ಕ್ರಮ ಕೈಗೊಳ್ಳುವಂತೆ ಸಂಡೂರು ಸಾಮಾಜಿಕ ಕಾರ್ಯಕರ್ತರಿಂದ ಒತ್ತಾಯ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಈ ಸಂದರ್ಭದಲ್ಲಿಯೇ ಸಚಿವ ಆನಂದ್ ಸಿಂಗ್ ವಿರುದ್ಧ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ವಿಜಯನಗರ, ಮಾರ್ಚ್, 20: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಈ ಸಂದರ್ಭದಲ್ಲಿಯೇ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿರುದ್ಧ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ 180 ಹೆಕ್ಟೇರ್ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಅವರ ಮಗ ಸಿದ್ದಾರ್ಥ ಸಿಂಗ್ ಠಾಕೂರ್, ಭಾಮೈದ ಧರ್ಮೇಂದ್ರ ಸಿಂಗ್, ಆಪ್ತರಾದ ಅಬ್ದುಲ್ ರಹೀಮ್ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಸಂಡೂರು ಸಾಮಾಜಿಕ ಕಾರ್ಯಕರ್ತ ಕೆ.ಆರ್. ಕುಮಾರಸ್ವಾಮಿ ಹಾಗೂ ಹೊಸಪೇಟೆ ನಗರಸಭೆಯ ಅಬ್ದುಲ್ ಖದೀರ್ ಆರೋಪ ಮಾಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಲು ಕೋರ್ಟ್‌ನಿಂದ ಆದೇಶ
ಈ ಕುರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ಬಳಿಯ ಎಮ್ಮಿಹಟ್ಟಿ ಗ್ರಾಮದಲ್ಲಿ ಒಟ್ಟು 330 ಹೆಕ್ಟೇರ್ ಇನಾಮ ಜಮೀನು ಇದೆ. ಈ ಪೈಕಿ 74 ಹೆಕ್ಟೇರ್ ಜಮೀನು 1982ರಲ್ಲಿ ರಾಜರತ್ನಂ, ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನ ಸಹೋದರರಿಗೆ ಮಂಜೂರಾಗುತ್ತದೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಇವರು ರಿಟ್ ಅರ್ಜಿ ಸಲ್ಲಿಸುತ್ತಾರೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು 1990ರಲ್ಲಿ ಹೈಕೋರ್ಟ್ ತಿಳಿಸುತ್ತದೆ.
ಜಮೀನು ಮಾರಾಟಕ್ಕೆ ಅರ್ಜಿ
ನಂತರ ವಿಷಯ ನನೆಗುದಿಗೆ ಬೀಳುತ್ತದೆ. 2019ರಲ್ಲಿ ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ತಮ್ಮ ಪ್ರಭಾವ ಬಳಸಿಕೊಂಡು ರಾಜರತ್ನಂ, ಶ್ರೀನಿವಾಸ್ ಹಾಗೂ ಸಹೋದರರ ಮೂಲಕ ಜಮೀನು ಮಾರಾಟಕ್ಕೆ ಅರ್ಜಿ ಹಾಕಿಸುತ್ತಾರೆ. ಅಂದಿನ ಸಂಡೂರು ತಹಶೀಲ್ದಾರ್ ರಶ್ಮಿ ಅವರು ತಪ್ಪು ವರದಿ ಕೊಟ್ಟು ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಗೆ ದೂರು ಕೊಟ್ಟ ನಂತರ ಅವರು ಅದನ್ನು ತಡೆಹಿಡಿದಿದ್ದರು ಎಂದು ತಿಳಿಸಿದರು.

ಚುನಾವಣೆ ಮುಗಿದ ನಂತರ ರಶ್ಮಿ ಅವರು ಪುನಃ ಸಂಡೂರು ತಹಶೀಲ್ದಾರ್ ಆಗಿ ನೇಮಕಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಉಪನೋಂದಣಾಧಿಕಾರಿಯಾಗಿದ್ದ ಜಯಪದ್ಮಾ, ಪ್ರಭಾರ ಕಂದಾಯ ನಿರೀಕ್ಷಕ ಕುಮಾರ್ ನಾಯಕ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀಣಾ ಅವರು ತಪ್ಪು ವರದಿ ಕೊಟ್ಟು, ರಾಜರತ್ನಂ ಮತ್ತು ಶ್ರೀನಿವಾಸ್ ಅವರಿಗೆ ಪಹಣಿ ಮಾಡಿಸಿಕೊಳ್ಳಲು ನೆರವಾಗುತ್ತಾರೆ.
ಅದನ್ನು ಆಧರಿಸಿ ಸಿದ್ದಾರ್ಥ್ ಸಿಂಗ್, ಧರ್ಮೇಂದ್ರ ಸಿಂಗ್ ಸೇರಿದಂತೆ ಇತರೆ 8 ಜನರಿಗೆ ಒಟ್ಟಿಗೆ ನೋಂದಣಿ ಮಾಡಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಇದರ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದರೂ ಅದನ್ನು ಪರಿಗಣಿಸದೆ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು.
ಪರಭಾರೆ ಮಾಡಿಕೊಂಡ ಜಮೀನಿನ ವಿವರ
ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ 13 ಹೆಕ್ಟೇರ್, ಧರ್ಮೇಂದ್ರ ಸಿಂಗ್ 22 ಹೆಕ್ಟೇರ್, ಪಿ.ನಾಗರಾಜ 22 ಹೆಕ್ಟೇರ್, ಅಬ್ದುಲ್ 22, ಪಿ.ಕುಮಾರಸ್ವಾಮಿ ಶೆಟ್ಟಿ 22, ಎನ್.ಶ್ರೀ ನಿವಾಸ್ 14, ಮೆಟಲ್ಡಾ 29, ಪಿ.ಬಸವರಾಜ 16 ಹೆಕ್ಟೇರ್, ಚಂದುಲಿಂಗನಗೌಡ 16, ಎಂ. ಸುಧೀರ ಕುಮಾರ್ 13 , ಸೂರ್ಯತೇಜ್ ಎಂಬವರಿಗೆ 15 ಹೆಕ್ಟೇರ್ ಭೂಮಿಯನ್ನು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರ್ ಹಾಗೂ ನೋಂದಣಾಧಿಕಾರಿಗಳು ಶಾಮೀಲಾಗಿ ಪರಭಾರೆ ಮಾಡಿದ್ದಾರೆ ಎಂದು ದೂರಿದರು.
ನ್ಯಾಯ ಸಿಗುವ ಭರವಸೆಯಿದೆ
ಈ ಕುರಿತು ಈಗಾಗಲೇ ಕರ್ನಾಟಕ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದ್ದು, ನ್ಯಾಯ ಸಿಗುವ ಭರವಸೆಯಿದೆ. ಒಂದು ವೇಳೆ ನ್ಯಾಯ ದೊರೆಯದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ಬಹುದಿನಗಳ ಸಾಗುವಳಿ ಮಾಡುತ್ತಿರುವ ರೈತರಿಗೆ ಇನಾಂ ಭೂಮಿಯನ್ನು ನೀಡದ ಅಧಿಕಾರಿಗಳು ಸಚಿವರ ಆಮಿಷ ಹಾಗೂ ಪ್ರಭಾವದ ಪರಿಣಾಮ ಕೆಲವೇ ದಿನಗಳಲ್ಲಿ ನ್ಯಾಯಾಲಯದ ತಡೆಯ ನಡುವೆ ಮಾರಾಟ ಮಾಡಲು ಪರಭಾರೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.












Click it and Unblock the Notifications