ಬಡವರ ಪರವಾಗಿ ಗೂಂಡಾಗಿರಿ ಮಾಡಿದ್ದೇನೆ: ತನ್ನ ವಿದ್ಯಾರ್ಥಿ ಜೀವನವನ್ನ ನೆನಪಿಸಿಕೊಂಡ ಶ್ರೀರಾಮುಲು
ಬಳ್ಳಾರಿ, ಡಿಸೆಂಬರ್, 10: ನಾನು ಮೊದಲು ಗಂಡಾಗಿರಿ ಮಾಡುತ್ತಿದ್ದೆ, ಬಹಳ ಜಗಳ ಮಾಡುತ್ತಿದ್ದೆ, ಬಡವರಿಗೆ ತೊಂದರೆ ಮಾಡಿದಾಗ ಮಾತ್ರ ಗುಂಡಾಗಿರಿ ಮಾಡುತ್ತಾ ಅವರ ಪರವಾಗಿ ನಿಲ್ಲುತ್ತಿದ್ದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೆ ಹೋಗಿದ್ದೇನೆ ಎಂದು ಸಚಿವ ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಗರದ ಎಸ್‌ಜಿ ಕಾಲೇಜ್ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಆಗಿದ್ದಾಗ ನಾನು ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಹೆಚ್ಡಿ ಮಾಡಿದ್ದೇನೆ. ನಾನು ಗೂಂಡಾಗಿರಿಯನ್ನೂ ಮಾಡುತ್ತಿದ್ದೆ. ಬಹಳ ಜಗಳವಾಡುತ್ತಿದ್ದೆ. ನನಗೆ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಬಾರಿ ಬುದ್ಧಿವಂತನಲ್ಲ, ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿದ್ದೆ. ಶಿಕ್ಷಕರು ಪ್ರೀತಿಯಿಂದ ಬೈಯ್ಯುತ್ತಿದ್ದರು. 5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣವಾಗಿದೆ ಎಂದರು.

ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿದ್ದೆ
ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದ ಸಂಘ ಇದಾಗಿದೆ. ಶಿಕ್ಷಕರು ಬಂದಾಗ ಲಾಸ್ಟ್ ಬೆಂಚ್ನಲ್ಲಿ ಕುಳಿತು ಅವರನ್ನು ಅಣಕಿಸುತ್ತಿದ್ದೆವು. ಕನ್ನಡ ಬರಲ್ಲ, ತೆಲುಗು ಬರಲ್ಲ, ಇಂಗ್ಲಿಷ್ ಬರಲ್ಲ ಎಂದು ಹೇಳುತ್ತಿದ್ದರು. ನೀನು ಯಾವ ಶಾಲೆಯಲ್ಲಿ ಕಲಿತಿದ್ದೆ ಎಂದು ಶಿಕ್ಷಕರು ಕೇಳುತ್ತಿದ್ದರು ಎಂದರು. ಅಲ್ಲದೇ ನಾನು ಯಾವಾಗಲೂ ಬಡವರ ಪರ ನಿಂತು ಜಗಳವಾಡಿ 14-16 ಬಾರಿ ಜೈಲಿಗೆ ಹೋಗಿದ್ದೇನೆ. ಬೇಲ್ ಕೊಡಿಸಲು ನಮ್ಮಪ್ಪ ವಕೀಲ ತಿಪ್ಪಣ್ಣ ಬಳಿ ಹೋಗುತ್ತಿದ್ದರು. ನಿನಗೆ ಎಷ್ಟು ಬಾರಿ ಬೇಲ್ ಕೊಡಿಸಬೇಕು ಎಂದು ತಿಪ್ಪಣ್ಣ ಬೈಯ್ಯುತ್ತಿದ್ದರು. ಇದನ್ನೆಲ್ಲ ಬಿಟ್ಟು ನಿಮ್ಮಪ್ಪನ ಜೊತೆ ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದರು. ನಾನು ಜೀನ್ಸ್ಪ್ಯಾಂಟ್ ಹಾಕಿಕೊಂಡು ಹೋದರೆ ಹುಡುಗಿಯರು ನೋಡುತ್ತಾರೆ. ನಾನು ಹೀಗೆಲ್ಲ ಬೇರೆ ಕಡೆ ಮಾತಾಡಿಲ್ಲ, ನಮ್ಮೂರಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಮಾತನಾಡುತ್ತಿರುವುದು ತಪ್ಪಾ? ಎಂದು ಪ್ರಶ್ನಿಸಿದರು. ಕಲಿಸಿದ ಶಿಕ್ಷಕರು ಹಾಗೂ ತನ್ನ ವಿದ್ಯಾರ್ಥಿ ಜೀವನವನ್ನು ಶ್ರೀರಾಮುಲು ನೆನಪಿಸಿಕೊಂಡರು.
ಜನಾರ್ದನ್ ರೆಡ್ಡಿ ಬಗ್ಗೆ ರಾಮುಲು ಹೇಳಿದ್ದೇನು?
ಇತ್ತೀಚೆಗಷ್ಟೇ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಬಂಡಾಯದ ಮುನ್ಸೂಚನೆ ನೀಡುತ್ತಿದ್ದಂತೆ ಸಚಿವ ಶ್ರೀರಾಮುಲು ಅವರು ಸ್ನೇಹದ ಮಂತ್ರ ಜಪಿಸಲು ಮುಂದಾಗಿದ್ದಾರೆ. ಜನಾರ್ದನ ರೆಡ್ಡಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸಲು ಸಿದ್ಧತೆ ಆರಂಭಿಸಿದ್ದು, ಬಿಜೆಪಿ ಬಗ್ಗೆ ಅಸಮಾಧಾನಗೊಂಡು ಹೊಸ ಪಕ್ಷ ಕಟ್ಟುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜನಾರ್ದನ ರೆಡ್ಡಿ, ಅಭಿಮಾನ ಅಂದರೆ ಬಿಜೆಪಿ, ನನ್ನ ಸಂಪೂರ್ಣ ರಾಜಕೀಯ ಜೀವನ ಅಂದರೆ ಅದು ಬಿಜೆಪಿ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಪ್ತಮಿತ್ರರಾಗಿದ್ದ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದು, ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇದೀಗ ಸಚಿವ ಶ್ರೀರಾಮುಲು ತಮ್ಮ ಹಾಗೂ ಜನಾರ್ದನ ರೆಡ್ಡಿ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಶ್ರೀರಾಮುಲು
ಬಳ್ಳಾರಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನವೊಲಿಸಿ, ಅವರ ಅಸಮಾಧಾನ ಹೋಗಲಾಡಿಸಲು ನಾನು ಸಿದ್ಧನಿದ್ದೇನೆ. ಅವರೊಂದಿಗಿನ ಸ್ನೇಹಕ್ಕೆ ಜೀವ ಕೊಡಲು ತಯಾರಿದ್ದೇನೆ" ಎಂದು ಶ್ರೀರಾಮುಲು ಹೇಳಿದ್ದಾರೆ. "ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು, ಸ್ನೇಹ ಅಂದ್ರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎನ್ನುವಂತೆ ಎಲ್ಲರೂ ಮಾತಾಡುತ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಶ್ರೀರಾಮುಲು. ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ ಎಂದು ಶ್ರೀರಾಮುಲು ತಮ್ಮ ನಡೆಯನ್ನು ತಿಳಿಸಿದ್ದರು.












Click it and Unblock the Notifications