ಗಾಲಿ ಜನಾರ್ದನ್ ರೆಡ್ಡಿ ನೂತನ ಪಕ್ಷದ ಬಾವುಟ ಬಿಡುಗಡೆ
ಬಳ್ಳಾರಿ, ಜನವರಿ, 01: ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಬಿಜೆಪಿ ಜೊತೆಗಿನ ಸಂಬಂಧಕ್ಕೆ ಇತ್ತೀಚೆಗಷ್ಟೇ ವಿದಾಯ ಹೇಳಿದ್ದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಇದೀಗ ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೆಆರ್ಪಿ ಪಕ್ಷದ ಬಾವುಟವನ್ನು ಅಧಿಕೃತವಾಗಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ. ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿದರು. ಹಸ್ತಲಾಘವ ಹೊಂದಿರುವ ಸಹಕಾರ ಮಾದರಿಯ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಲಾಗಿದೆ.
ಬಳಿಕ ಮಾತನಾಡಿದ ಅರುಣಾ ಲಕ್ಷ್ಮಿ, ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ಜನಾರ್ದನ್ ರೆಡ್ಡಿಯವರ ಬಯಕೆಯಾಗಿದೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ ಆಗಿದೆ. ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ. ಕುರುಬ ಸಮಾಜದ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬುದು ನನ್ನ ಪತಿಯ ನಂಬಿಕೆ ಆಗಿದೆ. ಹಾಗಾಗಿ, ಬಾವುಟ ಬಿಡುಗಡೆ ಕಾರ್ಯಕ್ರಮವನ್ನು ಕುರುಬ ಸಮಾಜದವರೊಂದಿಗೆ ಸೇರಿ ಚಾಲನೆ ನೀಡಲಾಯಿತು ಎಂದರು.

ನಿಮ್ಮನ್ನು ಬಿಟ್ಟು ನಮಗೆ ಯಾರೂ ಇಲ್ಲ
ಈ ಸಂದರ್ಭದಲ್ಲಿ ಬಸವಣ್ಣ, ವಾಲ್ಮೀಕಿ, ಕನಕದಾಸರನ್ನು ನೆನೆದ ಅರುಣಾ ಲಕ್ಷ್ಮಿ, ಬಸವಣ್ಣನವರ ಕುಲ ಕುಲವೆಂಬ ವಚನವನ್ನು ವಾಚಿಸಿದರು. ಕುಲ, ಮತ, ಜಾತಿ ಬೇಧವಿಲ್ಲದೆ ಪಕ್ಷವನ್ನು ಕಟ್ಟೋಣ. ಅನೇಕ ರೀತಿಯ ನೋವು, ಅವಮಾನವನ್ನು ರೆಡ್ಡಿಯವರು ಸಹಿಸಿಕೊಂಡಿದ್ದಾರೆ. ಜನಸೇವೆ ಮಾಡಬೇಕೆಂದು ಪಕ್ಷ ಕಟ್ಟಿದ್ದಾರೆ. ರೆಡ್ಡಿಯವರನ್ನು ಜನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತಂದೆ-ತಾಯಿ, ಬಂಧು ಬಳಗ ಎಲ್ಲವೂ ನೀವೇ. ನಿಮ್ಮನ್ನು ಬಿಟ್ಟು ನಮಗೆ ಯಾರೂ ಇಲ್ಲ ಎಂದರು.

ಚುನಾವಣಾ ಪ್ರಚಾರ ಆರಂಭ
ಈ ಸಂದರ್ಭದಲ್ಲಿ ದಮ್ಮೂರು ಶೇಖರ್, ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಕ್ಷದ ಬಾವುಟ ಬಿಡುಗಡೆಗೂ ಮುನ್ನ ಅವರು ತಮ್ಮ ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದರು. ಈ ವೇಳೆ ಅರುಣಾ ಲಕ್ಷ್ಮಿಗೆ ಹೂಗುಚ್ಛ ನೀಡಿ ಮುಸ್ಲಿಂ ಯುವತಿಯರು ಶುಭಾಶಯ ಕೋರಿದರು. ಗೋ ಪೂಜೆ ಬಳಿಕ ಬೆಣಕಲ್ ಗ್ರಾಮಕ್ಕೆ ತೆರಳಿದ ರೆಡ್ಡಿ ಪತ್ನಿ, ಗ್ರಾಮದಲ್ಲಿ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಷ್ಟೇ ಅಲ್ಲದೇ, ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.












Click it and Unblock the Notifications