ಶ್ರೀರಾಮುಲು ಬಗ್ಗೆ ಮಾತನಾಡಲು ಉಗ್ರಪ್ಪಗೆ ನೈತಿಕತೆಯಿಲ್ಲ: ಸುರೇಶ್ ಬಾಬು
ಬಳ್ಳಾರಿ, ಅಕ್ಟೋಬರ್ 18: ಭೂಕಬಳಿಕೆ ಪ್ರಕರಣದ ಆರೋಪ ಸಾಬೀತಾದರೆ ಸಿಎಂ ಹೇಳೋದು ಬೇಕಿಲ್ಲ, ಸ್ವತಃ ಶ್ರೀರಾಮುಲು ಅವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಾರೆಂದು ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಹೇಳಿದ್ದಾರೆ.
ಬಳ್ಳಾರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಯಿಂದ ಹಿಡಿದು ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಕೂಡ ಬೇಲ್ ಮೇಲೆ ಹೊರಗಡೆ ಇದ್ದಾರೆ, ಸಚಿವ ಶ್ರೀರಾಮುಲು ಹಾಗೂ ಬಿಜೆಪಿ ಪಕ್ಷದ ಬಗ್ಗೆ ಮಾತನಾಡಲು ಉಗ್ರಪ್ಪನವರಿಗೆ ನೈತಿಕತೆಯಿಲ್ಲ ಎಂದು ಮಾಜಿ ಶಾಸಕ ಟಿ.ಎಚ್ ಸುರೇಶ್ ಬಾಬು ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ಉಗ್ರಪ್ಪ ಹಿಂಬಾಗಿಲಿಂದ ರಾಜಕೀಯ ಮಾಡ್ತಾರೆ, ಅವರು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದರು. ಇಂತಹ ವ್ಯಕ್ತಿ ಶ್ರೀರಾಮುಲು ವಿರುದ್ಧ ಮಾತನಾಡಲು ಯಾವ ನೈತಿಕತೆಯಿದೆ, ಈ ಬಗ್ಗೆ ಬಿಜೆಪಿ ಪಕ್ಷವೂ ಕೂಡ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮಾಜಿ ಸಂಸದ ಉಗ್ರಪ್ಪ ಸವಾಲ್ ಹಾಕಿದ್ದಾರೆ, ಶ್ರೀರಾಮುಲು ಏನ್ ಅಭಿವೃದ್ಧಿ ಮಾಡಿದ್ದಾರೆ ಎಂದು? ಸಚಿವ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿ ಉಚಿತ ಆ್ಯಂಬುಲೆನ್ಸ್ ಸೇವೆ ಕೊಟ್ಟಿದ್ದಾರೆ. ಈಗಿನ ಸರಕಾರದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ . ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ವಿರುದ್ಧ ಉಗ್ರಪ್ಪ ನಿಂತರೆ, ನಮ್ಮ ಪಕ್ಷದ ಕಾರ್ಯಕರ್ತರೇ ರಾಮುಲು ಅವರನ್ನು ಗೆಲ್ಲಿಸಲಿದ್ದಾರೆ. ಶ್ರೀರಾಮುಲು ಅವರು ರಾಜ್ಯ ಮಟ್ಟದ ನಾಯಕರು ಎಂದರು. ಕಾಂಗ್ರೆಸ್‌ಗೆ ಅಭಿವೃದ್ಧಿ ಮಾಡುವುದು ಗೊತ್ತಿಲ್ಲ, ಸುಮ್ನೆ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸುರೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಉಗ್ರಪ್ಪನಿಗೆ ಯೋಗ್ಯತೆಯಿಲ್ಲ
ಸಚಿವ ಶ್ರೀರಾಮುಲು ಬಗ್ಗೆ ಮಾತನಾಡಲು ಉಗ್ರಪ್ಪನಿಗೆ ಯೋಗ್ಯತೆಯಿಲ್ಲ. ದೊಡ್ಡ ಫೈಲ್‌ಗಳು ತಂದು ಸುದ್ದಿಗೋಷ್ಠಿ ಮಾಡುತ್ತಾರೆ. ಕಾಂಗ್ರೆಸ್ ನವರು, ಫೈಲ್ ಒಳಗೆ ಕೇವಲ ಖಾಲಿ ಪೇಪರ್ ಇರುತ್ತದೆ ಎಂದು ವ್ಯಂಗ್ಯವಾಡಿದ ಅವರು, ಶ್ರೀರಾಮುಲು ದಲಿತ ಸಮುದಾಯದ ದೊಡ್ಡ ಆಸ್ತಿ, ಆರೋಪ ಸಾಬೀತಾದರೆ, ಸಿಎಂ ಹೇಳುವುದು ಬೇಕಿಲ್ಲ ಶ್ರೀರಾಮುಲು ರಾಜೀನಾಮೆ ನೀಡುತ್ತಾರೆ ಸುರೇಶ್ ಬಾಬು ಹೇಳಿದರು.

ಮೀಸಲಾತಿ ಹೆಚ್ಚಳದಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ
ನಮ್ಮ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ನಾಯಕ ಸಮಾಜಕ್ಕೆ ಮೀಸಲಾತಿ ಪ್ರಮಾಣ ಶೇ.3ರಿಂದ 7ಕ್ಕೇರಿದೆ. ಎಸ್ ಸಿ ಸಮಾಜ ಮೀಸಲಾತಿ ಪ್ರಮಾಣ ಶೇ.15ರಿಂದ 17ಕ್ಕೇರಿದೆ. ಇದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಆಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಈ ರೀತಿ ರಾಮುಲು ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರಾಮುಲು ಅವರು ನಮ್ಮ ದಲಿತ ಸಮಾಜಕ್ಕೆ ಒಂದು ಆಸ್ತಿ. ಅವರನ್ನು ಉಳಿಸಿಕೊಳ್ಳುವುದು ಅವರ ಘನತೆಗೆ ಧಕ್ಕೆ ಬಂದರೆ ನಾವೆಲ್ಲ ಅವರ ಪರ ಇರಲಿದ್ದೇವೆ ಎಂದು ತಿಳಿಸಿದರು.

ಶ್ರೀರಾಮುಲು ವಜಾಕ್ಕೆ ಆಗ್ರಹಿಸಿದ್ದ ಉಗ್ರಪ್ಪ
ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು, ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ

ಭೂಹಗರಣ ಪ್ರಕರಣದಲ್ಲಿ ರಾಮುಲು 6ನೇ ಆರೋಪಿ
ಬಳ್ಳಾರಿ ಅಕ್ರಮ ಭೂ ಹಗರಣ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ನಡೆದಿದ್ದು, ಈ ಲೋಕಾಯುಕ್ತ ಪೊಲೀಸ್ 6 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 11 ಜನರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದ್ದು, ಎ1 ಆಗಿನ ಜಿಲ್ಲಾಧಿಕಾರಿ ಬಿ.ಶಿವಪ್ಪ, ಎ2 ಆರ್ ವೆಂಕಟೇಶ್, ಎ3 ಶಶಿಧರ ಬಗಲಿ, ಎ4 ವೀರೇಶಬಾಬು, ಎ6 ಶ್ರೀರಾಮುಲು. ಜಮೀನು ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪಣೆಯ 6,000 ಪುಟಗಳ ಪಟ್ಟಿಯನ್ನು ಕಳೆದ ಮಾರ್ಚ್‌ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ. ಸಚಿವ ಶ್ರೀರಾಮುಲು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಾಗಿದ್ದು, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಪಡಿಸುತ್ತಿದ್ದಾರೆ.












Click it and Unblock the Notifications