ಬಳ್ಳಾರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ಈಗ ‘ಇ-ಸ್ಪಂದನೆ’
ಬಳ್ಳಾರಿ, ಜನವರಿ 29: ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ಸ್ವೀಕರಿಸುವ ಕಂಟ್ರೋಲ್ ರೂಂ "ಇ-ಸ್ಪಂದನೆ" ಪ್ರಾರಂಭಿಸಲಾಗಿದೆ.
ಈ ಕಂಟ್ರೋಲ್ ರೂಂ ಅನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಉದ್ಘಾಟಿಸಿದ್ದಾರೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸಮಸ್ಯೆಗಳನ್ನು ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಶೀಘ್ರವಾಗಿ ಪರಿಹರಿಸಲಾಗುತ್ತದೆ.
ವಾಟ್ಸ್ ಆಪ್ ನಂ: 8277888866 ಮೊಬೈಲ್ ನಂಬರ್ ಗೆ ಸಮಸ್ಯೆಗಳನ್ನು ಕಳುಹಿಸಬಹುದಾಗಿದೆ. ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ದೂರು, ಕುಂದುಕೊರತೆಗಳಿದ್ದಲ್ಲಿ ಈ ನಂಬರ್ ಗೆ ಸಂಬಂಧಿಸಿದ ಫೋಟೊ, ವಿಡಿಯೋ, ಸಂದೇಶಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬಹುದಾಗಿದೆ. ತಮ್ಮ ದೂರು/ಸಮಸ್ಯೆ/ಕುಂದುಕೊರತೆಗಳ ಪರಿಹಾರಕ್ಕಾಗಿ ಆ ಸಂದೇಶಗಳನ್ನು ಸಂಬಂಧಪಟ್ಟ ಇಲಾಖೆಗೆ ಶೀಘ್ರವಾಗಿ ರವಾನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

1077 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿಯೂ ದೂರು ದಾಖಲಿಸಬಹುದು. ಡಿಸಿ ಕಚೇರಿಯಲ್ಲಿ ಆರಂಭಿಸಲಾಗಿರುವ ಈ ಇ-ಸ್ಪಂದನೆ ಕೋಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ದೂರುದಾರರ ಹೆಸರು, ದೂರಿನ ವಿವರ ಹಾಗೂ ವಿಳಾಸ, ದಾಖಲೆಗಳನ್ನು ಪಡೆದುಕೊಂಡು ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆಯೋ ಅದಕ್ಕೆ ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಸ್‍ಎಂಎಸ್ ಮೂಲಕ ರವಾನಿಸಲಿದ್ದಾರೆ. ಅವರು ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಉತ್ತರವನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಲಿದ್ದಾರೆ. ಅವರು ಕಳುಹಿಸಿರುವುದಕ್ಕೆ ಸ್ವೀಕೃತಿ ಮತ್ತು ದೂರುದಾರರೂ ತಮ್ಮ ದೂರಿನ ಪ್ರಗತಿಯನ್ನು ಎಸ್‍ಎಂಎಸ್ ಮೂಲಕ ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಒಂದು ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ 30 ದಿನಗಳ ಕಾಲಾವಶಕಾಶ ನೀಡಲಾಗಿದ್ದು, ಅಷ್ಟರೊಳಗೆ ನಿರ್ದಿಷ್ಟ ಉತ್ತರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿ ಕಳುಹಿಸಬೇಕಿರುತ್ತದೆ.












Click it and Unblock the Notifications