ಇ-ಕೆವೈಸಿಗೆ ಏ.30ರ ಗಡುವು: ಇಲ್ಲವಾದಲ್ಲಿ ಪಡಿತರ ಸ್ಥಗಿತ
ಬಳ್ಳಾರಿ, ಏಪ್ರಿಲ್ 10: ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಸಬೇಕಿದೆ. ಉಚಿತವಾಗಿ ಇದನ್ನು ಮಾಡಿಸಲು ಸರ್ಕಾರ ಅವಕಾಶ ನೀಡಿದೆ. ಅಲ್ಲದೇ ಏಪ್ರಿಲ್ 30ರ ಗಡುವು ಸಹ ನಿಗದಿ ಮಾಡಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ಕುರಿತು ಮತ್ತೊಮ್ಮೆ ಎಲ್ಲಾ ಪಡಿತರ ಚೀಟಿದಾರರಿಗೂ ಮಾಹಿತಿಯನ್ನು ನೀಡಿದೆ.
ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕಡ್ಡಾಯವಾಗಿ ಎಲ್ಲರೂ ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಹೇಳಿದ್ದಾರೆ.

ಪಡಿತರ ಚೀಟಿದಾರರು ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ಮೂಲಕ ತಮ್ಮ ಗುರುತು, ನೋಂದಣಿ ಅಥವಾ ಮರು ನೋಂದಣಿ ಮಾಡಿಸಬಹುದು. ಇ-ಕೆವೈಸಿ ಮಾಡಿಸಲು ಎಲ್ಲರಿಗೂ ಏಪ್ರಿಲ್ 30ರ ತನಕ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳ ಆಹಾರ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ಮಾಡದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ.
ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ತರಲು ಕೇಂದ್ರ ಸರ್ಕಾರ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಸೂಚನೆ ನೀಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸಹ ಆದೇಶವನ್ನು ಹೊರಡಿಸಿದೆ. ಇ-ಕೆವೈಸಿ ಆಧಾರಿತ ವಹಿವಾಟುಗಳು ಈಗ ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳಲ್ಲಿ ಇದು ಸುಗಮ, ಸುರಕ್ಷಿತವಾಗಿದೆ.
ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸೇವೆಗಳಲ್ಲಿ, ಪಡಿತರ ವಿತರಣೆಯಲ್ಲಿ ಪಾರದರ್ಶಕ ಮತ್ತು ಸುಧಾರಿತ ಗ್ರಾಹಕ ಅನುಭವವನ್ನು ಒದಗಿಸಲಿದೆ. ಆದ್ದರಿಂದ ಬೆರಳಚ್ಚು ನೀಡುವ ಮೂಲಕ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಬೇಕಿದೆ.
ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ-ಕೆವೈಸಿ ಮಾಡಿಸಲು ಅಕವಾಶ ನೀಡಿತ್ತು. 2025ರ ಜನವರಿಯಲ್ಲಿ ಈಗ ಕೊನೆಯ ಅವಕಾಶವನ್ನು ನೀಡುತ್ತಿದ್ದೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ವಿತರಣೆಯನ್ನು ಸ್ಥಗಿತ ಮಾಡುತ್ತೇವೆ ಎಂದು ಹೇಳಿತ್ತು.
ಪಡಿತರ ಚೀಟಿದಾರರ ಬಗ್ಗೆ ಕೈಬಿಟ್ಟು ಹೋದ ಮಾಹಿತಿಗಳನ್ನು ಅಪ್‌ಡೇಟ್ ಮಾಡಲು ಸರ್ಕಾರವು ಇ-ಕೆವೈಸಿ (ಜೀವ ಮಾಪಕ ಮತ್ತು ದೃಢೀಕರಣ) ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಆದೇಶದಂತೆ ಇ-ಕೆವೈಸಿ ಕಡ್ಡಾಯವಾಗಿದೆ. ಅಂತ್ಯೋದಯ (ಎ.ಎ.ವೈ.), ಅಧ್ಯತಾ (ಪಿ.ಹೆಚ್.ಹೆಚ್) ಹಾಗೂ ಆದ್ಯತೇತರಾ (ಎನ್.ಪಿ.ಹೆಚ್.ಹೆಚ್) ಪಡಿತರ ಚೀಟಿಗಳಲ್ಲಿ ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಥವಾ ಬೆರಳಚ್ಚು ನೀಡಿದ ಸದಸ್ಯಸರುಗಳು ಸಹ ಈಗ ಇ-ಕೆವೈಸಿ ಮಾಡಿಸಬೇಕು.
ಉದ್ಯೋಗದ ವಿಧ್ಯಾಭ್ಯಾಸದ ಸಲುವಾಗಿ ಹಾಗೂ ಜೀವನೋಪಾಯ ಸಂಬಂಧ ಇತರೆ ಕಾರಣಗಳಿಂದಾಗಿ ಹೊರಗಿನ ಪ್ರದೇಶದಲ್ಲಿ ನೆಲೆಸಿರುವ ಪಡಿತರ ಚೀಟಿ ಸದಸ್ಯರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕಿದೆ. ಇ-ಕೆವೈಸಿ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.ಪಡಿತರ ಚೀಟಿದಾರರು ಯಾವುದೇ ಹಣ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications