ಡಿ.ಕೆ.ಶಿವಕುಮಾರ್ ಯಾವುದೇ ಸಮಯದಲ್ಲಿ ಜೈಲು ಪಾಲಾಗಬಹುದು: ರಾಮುಲು
ಬಳ್ಳಾರಿ, ಅಕ್ಟೋಬರ್ 13: ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಸಮಯದಲ್ಲಾದರೂ ಜೈಲು ಪಾಲಾಗಬಹುದು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಯಾವಾಗ ಬೇಕಾದರೂ ತನಿಖಾ ಸಂಸ್ಥೆಗಳು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಮೈತುಂಬಾ ಭ್ರಷ್ಟಾಚಾರದ ಕೇಸುಗಳನ್ನು ಹೊಂದಿರುವ ಅವರು ಬಳ್ಳಾರಿಯನ್ನು ಬದಲಾಯಿಸುವ ಮಾತುಗಳನ್ನಾಡುತ್ತಾರೆ, ಆದರೆ ಅವರ ಭವಿಷ್ಯವೇ ಅವರಿಗೆ ಗೊತ್ತಿಲ್ಲ ಎಂದು ರಾಮುಲು ಹೇಳಿದ್ದಾರೆ.

ಭ್ರಷ್ಟಾಚಾರ ಮಾಡಿ ಗಳಿಸಿದ ಹಣದಿಂದ ಬಳ್ಳಾರಿ ಚುನಾವಣೆ ಗೆಲ್ಲಲು ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಆದರೆ ಅವರಿಗೆ ಬಳ್ಳಾರಿಯ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಮುಲು ಹೇಳಿದರು.
ಬಳ್ಳಾರಿಯ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಕರೆದ ಸಭೆಗೆ ಹೋಗುತ್ತಾರೆ ಆದರೆ ಡಿ.ಕೆ.ಶಿವಕುಮಾರ್ ಕರೆದ ಸಭೆಗೆ ಹೋಗಿಲ್ಲ ಇದರಿಂದಲೇ ಗೊತ್ತಾಗುತ್ತದೆ ಅವರ ವರ್ಚಸ್ಸು ಬಳ್ಳಾರಿಯಲ್ಲಿ ಎಷ್ಟಿದೆ ಎಂಬುದು ಎಂದು ಅವರು ಕುಹುಕವಾಡಿದರು.
ಬಳ್ಳಾರಿ ಲೋಕಸಭೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪರವಾಗಿ ಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿದ್ದರೆ ಬಿಜೆಪಿ ಪರ ಉಸ್ತುವಾರಿಯನ್ನು ಶ್ರೀರಾಮುಲು ವಹಿಸಿಕೊಂಡಿದ್ದಾರೆ ಹಾಗಾಗಿ ಈ ಕ್ಷೇತ್ರದ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications