ವಿಜಯನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನು ಬಂಧಿಸದಿದ್ರೆ ಪೊಲೀಸ್ ಠಾಣೆಗೆ ಮುತ್ತಿಗೆ: ಶ್ರೀಕುಮಾರ ಮಹಾರಾಜ
ವಿಜಯನಗರ, ಆಗಸ್ಟ್ 18: ಕೆಎಂಎಫ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಭೀಮಾ ನಾಯ್ಕ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾಂಗ್ರೆಸ್‌ನ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ವಿರುದ್ಧ ಪ್ರಕರಣ ದಾಖಲಾಗಿ ಮೂರು ದಿನಗಳು ಕಳೆದರೂ ಇನ್ನೂ ಬಂಧಿಸಿಲ್ಲ. ಮುಂದಿನ 48 ಗಂಟೆಗಳಲ್ಲಿ ಬಂಧಿಸದಿದ್ದರೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಬಂಜಾರ ಧರ್ಮಗುರುಗಳ ಮಹಾಸಭಾದ ಕಾರ್ಯಾಧ್ಯಕ್ಷ ಬಾಗಲಕೋಟೆಯ ನೀಲಾನಗರದ ಶ್ರೀಕುಮಾರ ಮಹಾರಾಜ ಎಚ್ಚರಿಕೆ ನೀಡಿದ್ದಾರೆ.
ವಿಜಯನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿರಾಜ್ ಶೇಕ್ ಅವರು, ಬಂಜಾರ ಸಮಾಜದ ಹೆಣ್ಣುಮಕ್ಕಳನ್ನು ಅವಮಾನಿಸಿದ್ದಾರೆ. ಮಾಜಿ ಶಾಸಕ ಭೀಮಾನಾಯ್ಕ ಅವರನ್ನು ನಿಂದಿಸಿ ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಸಿದ್ದಾರೆ. ಅವರು ಮಾತಾಡಿರುವ ವಿಡಿಯೋಗಳನ್ನು ನೋಡಿದರೆ ಜನಪ್ರತಿನಿಧಿ ಹೇಗೆ ನಡೆದುಕೊಳ್ಳಬೇಕೆಂಬ ಪರಿಜ್ಞಾನ ಅವರಿಗಿಲ್ಲ ಎನಿಸುತ್ತದೆ ಎಂದರು.

ಬಂಜಾರ ಸಮಾಜ ಶಾಂತಿ ಪ್ರಿಯರು. ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಸಿರಾಜ್ ಶೇಕ್ ಆ ಸಮಾಜಕ್ಕೆ ಕಂಟಕವಾಗಿದ್ದಾರೆ. ಈ ವಿಡಿಯೋಗಳಿಂದ ಸಮಾಜದಲ್ಲಿ ಶಾಂತಿ ಕದಡಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರು, ಹೆಣ್ಣು ಮಕ್ಕಳ ಮೇಲೆ ಸಮಾಜದಲ್ಲಿ ರಂಪಾಟ ಮಾಡುವವರಿಂದ ಹೇಗೆ ಸಂಘಟನೆ ಮಾಡುತ್ತಾರೆ? ಮುಂದೆ ಚುನಾವಣೆ ಬರುತ್ತಿದೆ. ಹಾಗಾಗಿ ಕೂಡಲೇ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಂಧಿಸಿ, ತನಿಖೆ ನಡೆಸಬೇಕು. ಸಿರಾಜ್ ಶೇಕ್ ಅವರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಹಿಳಾಧ್ಯಕ್ಷೆಗೂ ನಿಂದಿಸಿದ್ದಾರೆ. ಪಕ್ಷ ಸಂಘಟನೆ ಮಾಡುವವರಿಗೆ ವ್ಯವಧಾನ ಇರಬೇಕು ಎಂದು ಕಿಡಿಕಾರಿದ್ದಾರೆ.
ಒಂದು ವೇಳೆ ಹೈಕಮಾಂಡ್ ಇಬ್ಬರನ್ನು ಕರೆದು ಸಂಧಾನ ನಡೆಸಿದರೆ, ಸಿರಾಜ್ ಶೇಕ್ ಅವರು ಸಮಾಜದ ಕ್ಷಮೆ ಕೇಳಿದರೆ ನಾವು ಒಪ್ಪಿಕೊಳ್ಳುತ್ತೇವೆ. ಅದೇ ರೀತಿ ಬಂಜಾರ ಸಮಾಜವನ್ನು ತುಳಿಯುವವರನ್ನು ವಿರೋಧಿಸುತ್ತೇವೆ ಎಂದರು.

ಕೊಪ್ಪಳದ ಶ್ರೀಗೋಸಾಯಿಬಾಬಾ ಮಾತನಾಡಿ, ಭೀಮಾನಾಯ್ಕ ಅವರನ್ನು ಅವಾಚ್ಯವಾಗಿ ನಿಂದಿಸಿರುವುದರಿಂದ ಸಮಾಜ ನೊಂದಿದೆ. ಬೀದರ್‌ನಲ್ಲಿ ಶಾಸಕ ಪ್ರಭು ಚವ್ಹಾಣ್ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಅವರಿಗೂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಮಹಾಸಭಾದ ಸಂಘಟನಾಕಾರ ತರಿಕೇರೆಯ ಮಂಜು ಮಹಾರಾಜ, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ದಾವಣಗೆರೆಯ ವೆಂಕಟೇಶ್ ಗುರೂಜಿ, ಬಂಜಾರ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಗಿರೀಶ್ ಇದ್ದರು.
ವಿಜಯನಗರ ಎಸ್ಪಿಗೆ ಮನವಿ
ಬಂಜಾರ ಸಮಾಜ ಹಾಗೂ ಹೆಣ್ಣು ಮಕ್ಕಳ ಕುರಿತು ಅವಾಚ್ಯವಾಗಿ ನಿಂದಿಸಿರುವ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಅವರನ್ನು ಬಂಧಿಸುವಂತೆ ಬಂಜಾರ ಧರ್ಮಗುರುಗಳ ಮಹಾಸಭಾದಿಂದ ಎಸ್ಪಿ ಶ್ರೀಹರಿಬಾಬು ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.
ಪ್ರಕರಣದ ಕುರಿತು ನಿಸ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಹರಪನಹಳ್ಳಿ ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಪ್ರಕರಣ ದಾಖಲಾದ ಮರುದಿನವೇ ನಾಲ್ಕು ತಂಡಗಳನ್ನು ರಚಿಸಿ ಪಾರದರ್ಶಕ ತನಿಖೆ ನಡೆಸಲಾಗುತ್ತಿದೆ. ಎಲ್ಲರು ಶಾಂತಿಯುತವಾಗಿ ಸಹಕರಿಸಬೇಕು ಎಂದು ವಿಜಯನಗರ ಎಸ್‌ಪಿ ಬಿ.ಎಲ್ ಶ್ರೀಹರಿಬಾಬು ತಿಳಿಸಿದ್ದಾರೆ.












Click it and Unblock the Notifications