ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕಂಪ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ, ಮೇ 2: ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೆ ಮತ ಹಾಕಲು ಮತದಾರರಿಗೆ ಚೀಟಿ ವಿತರಿಸುತ್ತಿದ್ದ ಆರೋಪದ ಮೇಲೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ಪಟ್ಟಣದ ವಿನಾಯಕನಗರ, ತಾಲೂಕಿನ ನಂ. 10 ಮುದ್ದಾಪುರ ಹಾಗೂ ದೇವಸಮುದ್ರ ಗ್ರಾಮದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಬಿಜೆಪಿ ಅಭ್ಯರ್ಥಿ ಟಿ.ಎಚ್. ಸುರೇಶ್ ಬಾಬು ಅವರಿಗೆ ಮತ ನೀಡಿ ಎಂದು ಮತದಾರರ ಹೆಸರು, ವಿಳಾಸ, ಮತದಾನ ಮಾಡುವ ಸ್ಥಳದ ವಿವರವುಳ್ಳ ಚೀಟಿಗಳನ್ನು ನೀಡುತ್ತಿರುವ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಬಂದಿತ್ತು.

ಈ ಕುರಿತು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅನುಮತಿ ಇಲ್ಲದೇ ಕೆಲ ಯುವಕರು ಮೈ ಅಸೆಂಬ್ಲಿ ಎನ್ನುವ ಮೊಬೈಲ್ ಅಪ್ಲಿಕೇಷನ್ ಮೂಲಕ ಮತದಾರರ ಹೆಸರು, ವಿಳಾಸ, ವೋಟರ್ ಐಡಿ ನಂಬರ್ ಪಡೆದು ಮತದಾನ ಮಾಡುವ ಸ್ಥಳದ ವಿವರ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಚುನಾವಣಾ ಪ್ರಚಾರ ನಡೆಸಿರುವುದು ಕಂಡುಬಂದಿದೆ ಎನ್ನಲಾಗಿದೆ.
ಈ ಕುರಿತು ಎಫ್‌ಎಸ್‌ಟಿ ತಂಡದ ಅಧಿಕಾರಿ ವಿನೋದ್ ಕುಮಾರ್ ನೀಡಿದ ದೂರಿನ ಮೇರೆಗೆ ಯೋಗಾನಂದ್, ಸಂತೋಷ್, ಮುಕ್ತುಂ ಜಾನಿ, ಮಾಬು, ಕಾರ್ತಿಕ್, ಋಷಿ ಹಾಗೂ ಕಂಪ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಸೇರಿ 7 ಜನರ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಈ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್‌ಗಳು, 12 ಪ್ರಿಂಟಿಂಗ್ ಮಿಷನ್, ಒಂದು ಮತದಾರರ ಮಾಹಿತಿ ಪಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications