ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಬಿಜೆಪಿ ಸದಸ್ಯ!
ಬಳ್ಳಾರಿ, ಏಪ್ರಿಲ್ 28 : ಜಿಲ್ಲಾ ಪಂಚಾಯಿತಿಗೆ ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಕೊಟ್ಟೂರಿನ ಹಿರಿಯ ಮುಖಂಡ ಎಂ.ಎಂ.ಜೆ. ಹರ್ಷವರ್ಧನ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಪಿ. ಭೀಮಾನಾಯ್ಕ ಪರವಾಗಿ ರಾಂಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್ಸಿಗರಲ್ಲಿ ಮತ್ತು ಬಿಜೆಪಿ ಮುಖಂಡರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಅಷ್ಟೇ ಅಲ್ಲ, ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ದೂರು ನೀಡಲು ಅನೇಕ ಕಾಂಗ್ರೆಸ್ಸಿಗರು ಮತ್ತು ಬಿಜೆಪಿ ಮುಖಂಡರು ತೀರ್ಮಾನಿಸಿದ್ದಾರೆ.
ಮೂಲತಃ ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬಂದಿರುವ ಹರ್ಷವರ್ಧನ, ಭೀಮಾನಾಯ್ಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ, ಕೊಟ್ಟೂರು ತಾಲೂಕಾಗಿ ಘೋಷಣೆಯಾದಾಗ ನಡೆದ ಸಾರ್ವಜನಿಕ ಸಭೆಯಲ್ಲಿ ವಾಚಾಮಗೋಚಾರವಾಗಿ ಬೈಯ್ದು ಹೀಯಾಳಿಸಿದ್ದು ಅಲ್ಲದೇ, ಈಗ ಅವರೇ ಭೀಮಾನಾಯ್ಕ ಪರವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅನೇಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಹರ್ಷವರ್ಧನ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ, ಜಿಲ್ಲಾ ಪಂಚಾಯಿತಿ ಬಿಜೆಪಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆ ಆಗಿ, ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಮಾಡುವುದು ಸೂಕ್ತ ಎನ್ನುವುದು ಅನೇಕರ ಮಾತಾಗಿದೆ.
ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ ಅವರು ಬಿಜೆಪಿಯಿಂದ ಆಯ್ಕೆಯಾದ ಯಾರೇ ಆಗಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಕೈಗೊಂಡಲ್ಲಿ ಪಕ್ಷದ ಹೈ ಕಮಾಂಡ್ ಗಮನಕ್ಕೆ ತರುವ ಮೂಲಕ ಉಚ್ಛಾಟನೆ, ಪಕ್ಷಾಂತರ ನಿಷೇಧ ಅಥವಾ ಇತರೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications