Bird Flu: ಬಳ್ಳಾರಿಯಲ್ಲಿ ಹಕ್ಕಿ ಜ್ವರ, ಅಂತರರಾಜ್ಯ ಚೆಕ್‌ಪೋಸ್ಟ್ ಸ್ಥಾಪನೆ
ಬಳ್ಳಾರಿ, ಮಾರ್ಚ್ 09: ಹಕ್ಕಿ ಜ್ವರ (ಕೋಳಿಶೀತ ಜ್ವರ) ಕಂಡು ಬಂದಿರುವ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಈ ಜ್ವರಕ್ಕೆ ಸಂಬಂಧಿಸಿದಂತೆ ಭಯಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾಡಳಿತ ಕರೆ ನೀಡಿದೆ. ಜಿಲ್ಲೆಯಲ್ಲಿ ಅಂತರರಾಜ್ಯ ಚೆಕ್‌ಪೋಸ್ಟ್ ಸ್ಥಾಪನೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋಳಿ ಶೀತ ಜ್ವರ ಕಂಡುಬಂದ ಹಿನ್ನಲೆಯಲ್ಲಿ ಅಂತರ್ ರಾಜ್ಯದಿಂದ ಬರುವ ಕೋಳಿಗಳ ಆರೋಗ್ಯ ತಪಾಸಣೆಗಾಗಿ ಬಳ್ಳಾರಿ ಹಾಗೂ ಸಿರುಗುಪ್ಪ ತಾಲ್ಲೂಕು ಭಾಗಗಳ 6 ವಿವಿಧ ಸ್ಥಳಗಳಲ್ಲಿ ಅಂತರರಾಜ್ಯ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ ಕಾರಬಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬಳ್ಳಾರಿ ತಾಲೂಕಿನಲ್ಲಿ ಎತ್ತಿನ ಬೂದಿಹಾಳ್ ಕ್ರಾಸ್, ಸಿಂಧುವಾಳ ಕ್ರಾಸ್ ಮತ್ತು ಪರಮದೇವನಹಳ್ಳಿ (ಹಗರಿ). ಸಿರುಗುಪ್ಪ ತಾಲೂಕಿನಲ್ಲಿ ಮಾಟಸೂಗೂರು, ವಟ್ಟು ಮುರುವಾಣಿ ಮತ್ತು ಇಟಗಿನಹಾಳ್‌ನಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ.
ಜನರು ಭಯಪಡಬೇಡಿ: ಜನರು ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಭಯಪಡಬೇಡಿ. ತಮ್ಮ ಸುತ್ತ-ಮುತ್ತ ತಾವಾಗಿಯೇ ಮರಣ ಹೊಂದಿದ ಕೋಳಿ, ಪಕ್ಷಿಗಳು ಕಂಡುಬಂದಲ್ಲಿ ಮುಟ್ಟದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಕರೆ ನೀಡಿದ್ದಾರೆ.
ಕೋಳಿ ಶೀತ ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಂಡವು ಮನೆ ಮನೆ ಭೇಟಿಯ ಮೂಲಕ ಆರೋಗ್ಯ ಜಾಗೃತಿ ನೀಡುತ್ತಿರುವುದರ ಕುರಿತು ಪರಿಶೀಲಿಸಿದ ಅವರು, ಜನರ ಜೊತೆ ಈ ಕುರಿತು ಮಾತುಕತೆ ನಡೆಸಿದರು.
ಕೋಳಿ ಶೀತ ಜ್ವರವು (ಹಕ್ಕಿಗಳಿಗೆ ಸಂಬಂಧಿಸಿದ) ವೈರಾಣುಗಳಿಂದ ಉಂಟಾಗಿದ್ದು, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಶ್ವಾಸೋಚ್ಛಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಹಕ್ಕಿ ಜ್ವರ ಪ್ರಕರಣ ವರದಿಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಸಿಬ್ಬಂದಿಯವರಿಂದ ಮನೆ ಮನೆ ಭೇಟಿ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ತಮ್ಮ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ಕೋಳಿ ಹಾಗೂ ಇತರೆ ಪಕ್ಷಿಗಳು ಮೃತಪಟ್ಟಿರುವ ಮಾಹಿತಿ ಬಂದರೆ ಅವುಗಳನ್ನು ಮುಟ್ಟಬಾರದು ಎಂದರು.
ಗ್ರಾಮಸ್ಥರಲ್ಲಿ ಅಥವಾ ಸೋಂಕು ವರದಿಯಾದ ಬೇರೆ ಊರಿನಿಂದ ಆಗಮಿಸಿದ ಯಾರಿಗಾದರೂ ಕೆಮ್ಮು, ತೀವ್ರ ಜ್ವರ, ಉಸಿರಾಟದಲ್ಲಿ ತೊಂದರೆ, ಮೂಗು ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನ ಊತ ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಔಷಧೋಪಾರ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸೋಂಕು ತಗುಲಿದ ಕೋಳಿ ಮರಿಗಳ ಪುಕ್ಕಗಳನ್ನು ತರಿಯುವ ಮತ್ತು ಹತ್ಯೆಮಾಡುವ ಕಾರ್ಯಗಳಲ್ಲಿ ನಿರತರಾದ ವಯಸ್ಕರಲ್ಲಿ ಹೆಚ್ಚಾಗಿ ಈ ಸೋಂಕು ಬರಬಹುದು. ಕಾರಣ ಸೋಂಕು ತಗಲಿದ, ಸಾಯುವ ಹಂತದಲ್ಲಿರುವ ಕೋಳಿಗಳಿರುವ ವಾತಾವರಣದಲ್ಲಿ ನಿರತರಾದ ಮಕ್ಕಳಿಗೂ ಈ ಸೋಂಕು ಹರಡುತ್ತದೆ. ಹಾಗಾಗಿ ವ್ಯಾದಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಒಂದು ವೇಳೆ ಮನೆಯಲ್ಲಿ ಸಾಕಿದ ಇಲ್ಲವೇ, ಸೋಂಕು ಕಂಡುಬಂದ ಕೋಳಿ, ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು ಅಥವಾ ಕೈಯಿಂದ ಮುಟ್ಬಬಾರದು ಎಂದರು.
ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರಬಹುದಾಗಿದ್ದು, ಮಕ್ಕಳು ಸ್ಪರ್ಶಮಾಡುವುದಕ್ಕಾಗಲಿ ಅಥವಾ ಅವುಗಳೊಂದಿಗೆ ಆಟ ಆಡುವುದಾಗಲೀ ಅಥವಾ ಸಾಗಿಸುವುದಾಗಲಿ ಬಿಡಬಾರದು. ಸಾರ್ವಜನಿಕರು ಭಯಪಡದೆ ಆಕಸ್ಮಿಕವಾಗಿ ಕೋಳಿ, ಹಕ್ಕಿಗಳನ್ನು ಮುಟ್ಟಿದರೆ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಇತ್ತೀಚೆಗೆ ಕೋಳಿ ಸಾಕಾಣಿಕೆ ಮಾಡುವ ಕೇಂದ್ರದಲ್ಲಿ ಅಸಹಜವಾಗಿ ಕೋಳಿಗಳು ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಳಿ ಫಾರಂ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಮಾಲೀಕರಿಗೆ ಸೂಚನೆ ನೀಡಿದರು.












Click it and Unblock the Notifications