ಗಣಿನಾಡಿ ಎಂಟ್ರಿಕೊಟ್ಟ ಭಾರತ್ ಜೋಡೋ; ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಖರ್ಗೆ, ಭೂಪೇಶ್ ಬಘೇಲ್
ಬಳ್ಳಾರಿ, ಅಕ್ಟೋಬರ್ 15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವ ಭಾರತ್ ಜೋಡೋ ಯಾತ್ರೆ ಶನಿವಾರ ಗಣಿನಾಡು ಬಳ್ಳಾರಿಗೆ ಆಗಮಿಸಿದೆ. ಶುಕ್ರವಾರ ರಾತ್ರಿ ಆಂದ್ರದ ಓಬಳಾಪುರಂನಿಂದ ಬಳ್ಳಾರಿಗೆ ಆಗಮಿಸಿದ ಪಾದಯಾತ್ರೆ ರಾತ್ರಿ ಹಲಕುಂದಿ ಮಠದ ಮೈದಾನದಲ್ಲಿ ವಿಶ್ರಾಂತಿ ಪಡೆದಿದ್ದರು. ಶನಿವಾರ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ನಡೆಯುತ್ತಿದೆ.
ಶನಿವಾರ ಭಾರತ್ ಜೋಡೋ ಯಾತ್ರೆ ಹಲಕುಂದಿ ಮಠದಿಂದ ಬಳ್ಳಾರಿಯ ಕಮ್ಮ ಭವನದವರೆಗೆ ನಡೆಯಲಿದೆ. ಈಗಾಗಲೆ ಆರಂಭವಾಗಿರುವ ಯಾತ್ರೆಯಲ್ಲಿ ರಾಹುಲ್ ಜೊತೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಚತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಜೊತೆಯಾಗಿ ಹೆಜ್ಜೆಯಾಕುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ 3700 ಕಿಲೋ ಮೀಟರ್ ಯಾತ್ರೆ ಈವರೆಗೂ ಒಟ್ಟು 1022 ಕಿಲೋ ಮೀಟರ್ ಕ್ರಮಿಸಿದೆ. ಇದರಲ್ಲಿ ರಾಹುಲ್ ಗಾಂಧಿ ಮತ್ತು ತಂಡ ಸುಮಾರು 679 ಕಿಲೋ ಮೀಟರ್ ಹೆಜ್ಜೆ ಹಾಕಿದ್ದಾರೆ.
ಪಾದಯಾತ್ರೆ ಬಳ್ಳಾರಿಯ ನ್ಯಾಯಾಲಯದ ಎದುರಿರುವ ಕಮ್ಮ ಭವನದಲ್ಲಿ ಬೆಳಗಿನ ಉಪಹಾರ ಸೇವಿಸಲಿ ಅಲ್ಲೇ ವಿರಾಮ ಪಡೆಯಲಿದೆ. ಮತ್ತೆ ಮಧ್ಯಾಹ್ನ 1:30ಕ್ಕೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕರ ಸಭೆ ನಡೆಯಲಿದ್ದು, ರಾತ್ರಿ ಸಂಗನಕಲ್ಲು ಗ್ರಾಮದಲ್ಲಿ ತಂಗಲಿದೆ.

ಬಳ್ಳಾರಿಯಲ್ಲಿ ಬೃಹತ್ ಬಹಿರಂಗ ಸಭೆ
ಇನ್ನು ಇಲ್ಲಿ ನಡೆಯಲಿರುವ ಸಮಾವೇಶದಲ್ಲಿ 4-5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ರಾಹುಲ್ ಸಹೋದರಿ ಪ್ರಿಯಾಂಕ್ ವಾದ್ರಾ ಕೂಡ ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಪಡೆಯಬೇಕೆಂದುಕೊಂಡಿರುವ ಕಾಂಗ್ರೆಸ್ ಪಕ್ಷ ಬಳ್ಳಾರಿಯಿಂದಲೇ ತನ್ನ ಚುನಾವಣಾ ಕಹಳೆಯನ್ನು ಮೊಳಗಿಸಲಿದೆ.

ಸಮಾವೇಶಕ್ಕೆ 4-5 ಲಕ್ಷ ಜನರು ಭಾಗಿ ಸಾಧ್ಯತೆ
ಈಗಾಗಲೆ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜಾಗಿದ್ದು, ವೇದಿಕೆಯಲ್ಲಿ 60 ಮಂದಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ವೇದಿಕೆ ಮುಂಭಾಗ 60 ಸಾವಿರ ಜನರು ಕುಳಿತುಕೊಳ್ಳುವಷ್ಟುಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶ ಸೇರಿ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಿಂದ ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಬಳ್ಳಾರಿ ಸಮಾವೇಶಕ್ಕೆ ಆಗಮಿಸಲಿದ್ದಾರೆ.

ಲಕ್ಷಾಂತರ ಜನಕ್ಕೆ ಊಟದ ವ್ಯವಸ್ಥೆ
ನಗರದ ಅಲ್ಲಂ ಭವನದಲ್ಲಿ ಹತ್ತಾರು ಜನರ ಬಾಣಸಿಗರು ಅಡುಗೆ ಸಿದ್ಧತೆಯಲ್ಲಿದ್ದು, ಡಬ್ಬಿಯಲ್ಲಿ ಊಟವನ್ನು ತುಂಬಿಡಲು 100ಕ್ಕೂ ಹೆಚ್ಚು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಕೇಸರಿಬಾತ್, ಚಿತ್ರಾನ್ನ, ಮೊಸರನ್ನ, ಪಲಾವ್, ಪುಳಿಯೊಗರೆ, ರೈಸ್‌ಬಾತ್ ತಯಾರಿಸಲಾಗುತ್ತಿದೆ. ಊಟದ ಡಬ್ಬಿಯ ಜತೆಗೆ ಅರ್ಧ ಲೀಟರ್‌ನ ನೀರಿನ ಬಾಟಲ್‌ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ಮಾಜಿ ಸಚಿವ ಅನಿಲ್ ಲಾಡ್ ಅವರು ಊಟ ವ್ಯವಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

2 ಸಾವಿರಕ್ಕೂ ಹೆಚ್ಚಿನ ಪೊಲೀಸ್ ನಿಯೋಜನೆ
ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ಪಾದಯಾತ್ರೆಗೆ 2 ಸಾವಿರಕ್ಕೂ ಹೆಚ್ಚು ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, ಶುಕ್ರವಾರ ಬೆಳಗ್ಗೆಯೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಪೊಲೀಸರು ಬಳ್ಳಾರಿ ತಲುಪಿದ್ದಾರೆ. ಪೊಲೀಸರಿಗೆ ವಾಸ್ತವ್ಯಕ್ಕೆ ನಗರದ ಕಲ್ಯಾಣ ಮಂಟಪಗಳು, ಲಾಡ್ಜ್‌ಗಳು, ವಸತಿ ನಿಲಯಗಳನ್ನು ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದ ವೇಳೆ ಡ್ರೋನ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.












Click it and Unblock the Notifications