ಬಳ್ಳಾರಿ ಚೋರ್ ಬಾಬುಲಾಲ್ ಯಾವುದೇ ಕ್ಷಣ ಬಂಧನ
ಬಳ್ಳಾರಿ, ಮೇ 9: ಕೋಟ್ಯಂತರ ಹವಾಲಾ ಹಣ ಪತ್ತೆ ಪ್ರಕರಣ ತಿಳಿದವರು ಏನಪ್ಪಾ ಒಂದು ತಿಂಗಳಾಯ್ತು, ಇನ್ನೂ ಆರೋಪಿ ಚೋರ್ ಬಾಬುಲಾಲ್ ಬಂಧನವಾಗಿಲ್ಲವಾ? ಎಂದು ಆಶ್ಚರ್ಯಪಡಬಹುದು. ಆದರೂ ವಾಸ್ತವ ಏನಪ್ಪಾ ಅಂದರೆ ಬಂಧನದ ಭೀತಿಯಲ್ಲಿದ್ದ ಚೋರ್ ಬಾಬುಲಾಲ್, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಪೊಲೀಸರು ಆತನ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದ್ದರು.
ಆದರೆ ಬಾಬುಲಾಲ್ ಜಾಮೀನು ಅರ್ಜಿಯನ್ನು ಇಂದು ಆಲಿಸಿದ ಜಿಲ್ಲಾ 2ನೆ ಅಪರ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ ಕೋಟಿ ಕೋಟಿ ಹವಾಲಾ ಹಣ ಪತ್ತೆ ಪ್ರಕರಣ ಸಂಬಂಧ ಬಳ್ಳಾರಿಯ ಲೇವಾದೇವಿಗಾರ ಚೋರ್ ಬಾಬುಲಾಲನನ್ನು ಪೊಲೀಸರು ಯಾವುದೇ ಕ್ಷಣ ಬಂಧಿಸಬಹುದಾಗಿದೆ.

ಜತೆಗೆ, ಚೋರ್ ಬಾಬುಲಾಲನ ಇಬ್ಬರು ಪುತ್ರರನ್ನು ಸಹ ಬಂಧಿಸಬಹುದಾಗಿದೆ. ಬಾಬುಲಾಲ್ ಹಾಗೂ ಅವರ ಪುತ್ರರಾದ ರಮೇಶ್ ಪರಶುರಾಮ್ ಪುರಿಯಾ ಹಾಗೂ ಶ್ರೀಕಾಂತ್ ಪರಶುರಾಮ್ ಪುರಿಯಾ ಅವರು ಭಾರಿ ಪ್ರಮಾಣದಲ್ಲಿ ಹವಾಲಾ ಹಣ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. (ಚೋರ್ ಬಾಬುಲಾಲ್ ಯಾರು? ಆತನ ದಂಧೆಯೇನು?)
ಹಿನ್ನೆಲೆ: ಮತದಾರರಿಗೆ ಹಂಚಲು ರಾಜಕೀಯ ಪಕ್ಷಗಳಿಗೆ ಸಾಲ ನೀಡುವ ಕುರಿತಂತೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಬಾಬುಲಾಲ್ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ನಗದು ಹಾಗೂ ಠೇವಣಿ ಪತ್ರ, ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ಬಳ್ಳಾರಿಯಲ್ಲಿ ಭಾರಿ ಭಾರಿ ಹವಾಲಾ ಹಣ ಪತ್ತೆ!)
ಪ್ರಸ್ತುತ ಬಾಬುಲಾಲ್ ಮತ್ತು ಪುತ್ರರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬಳ್ಳಾರಿ ನ್ಯಾಯಾಲಯ ಆರೋಪಿಗಳ ಬಂಧನಕ್ಕೆ ಆದೇಶ ನೀಡಿದ್ದು, ಗಾಂಧಿನಗರ ಪೊಲೀಸರು ಬಾಬುಲಾಲ್ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.












Click it and Unblock the Notifications