ಬಳ್ಳಾರಿ: ಬಲೂನ್ ಗಳ ಮೂಲಕ ಮತ ಜಾಗೃತಿ
ಬಳ್ಳಾರಿ. ಮಾ. 27: ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾ ಆಡಳಿತ ವಿನೂತವಾಗಿ ಯುವ ಮತದಾರರನ್ನು ಆಕರ್ಷಿಸಲು ಬಲೂನ್ ಗಳ ಮೂಲಕ ಮತದಾರರ ಜಾಗೃತಿ ಮೂಡಿಸುತ್ತಿದೆ.
'ತಲೆ ಎತ್ತಿ ಬನ್ನಿ ನಿಮ್ಮ ಮತಗಟ್ಟೆಗೆ', 'ನಿರ್ಭಯವಾಗಿ ಮತಚಲಾಯಿಸಿ', 'ನಾವು ನಿಮ್ಮ ಹಕ್ಕು' ಹಾಗು 'ನಿಮ್ಮನ್ನು ರಕ್ಷಿಸಲು ಜಿಲ್ಲಾ ಆಡಳಿತ ಪಣತೊಟ್ಟಿದೆ' ಎನ್ನುವ ಘೋಷ ವಾಕ್ಯಗಳನ್ನು ಒಳಗೊಂಡಿರುವ ಬಲೂನ್ ಗಳು ಬಿಡಿಎಎ ಮೈದಾನ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಹೊಸಪೇಟೆಯ ತಾಲೂಕ ಕ್ರೀಡಾಂಗಣದ ಬಳಿ ರಾರಾಜಿಸುತ್ತಿವೆ.
ಯುವ ಮತದಾರರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಲೂನ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಮತದಾರರು ಕಡ್ಡಾಯವಾಗಿ ಮುಕ್ತವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಲೋಕಸಭಾ ಚುನಾವಣೆಯಲ್ಲಿ ಮುದ್ರಣ, ವಿದ್ಯುನ್ಮಾನ ಮಾದ್ಯಮಗಳಲ್ಲಿ ಪ್ರಸಾರವಾಗುವ ಕಾಸಿಗಾಗಿ ಸುದ್ದಿ, ಜಾಹಿರಾತು ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲು ಎಂಸಿಎಂಸಿ ತಂಡ, ವೀಡಿಯೋ ವೀವಿಂಗ್ ತಂಡ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೂಚಿಸಿದ್ದಾರೆ. ಫೇಸ್ ಬುಕ್, ಟ್ವೀಟರ್, ಯು ಟೂಬ್ ಗಳ ಮೇಲೆ ನಿಗಾ: ಅಭ್ಯರ್ಥಿಗಳ ವೆಚ್ಚಕ್ಕೆ ಜಮೆ ಎಂದು ಡಿಸಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ. ಇನ್ನಷ್ಟು ಸಚಿತ್ರ ವರದಿ ಮುಂದಿದೆ.

ಅಮ್ಲಾನ್ ಆದಿತ್ಯ ಬಿಸ್ವಾಸ್ ಸೂಚನೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಂಸಿಎಂಸಿ ಹಾಗು ವೀಡಿಯೋ ವೀವಿಂಗ್ ತಂಡಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಾಸಿಗಾಗಿ ಸುದ್ದಿ ಮತ್ತು ಜಾಹಿರಾತುಗಳ ಪ್ರಸಾರ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ವರದಿ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಗರಾಭಿವೃದ್ಧಿ ಕೋಶ ಹಾಗು ತಾಲೂಕ ಮಟ್ಟದಲ್ಲಿ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಪರಿಶೀಲನಾ ಕೊಠಡಿಯನ್ನು ಪ್ರಾರಂಭಿಸಬೇಕು.

ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ
ಎಲ್ಲಾ ಪತ್ರಿಕೆಗಳನ್ನು ಪಡೆದು ಪರಿಶೀಲಿಸಬೇಕು. ಟಿವಿಯನ್ನು ಅಳವಡಿಸಿ ಪ್ರಮುಖ ಕೇಬಲ್‍ಗಳ ಸಂಪರ್ಕ ನೀಡಲಾಗುವುದು. ಇಂಟರ್ ನೆಟ್ ಸೌಲಭ್ಯವಿರುವ ಕಂಪ್ಯೂಟರ್ ಗಳನ್ನು ಅಳವಡಿಸಲಾಗುವುದು. ಸೋಷಿಯಲ್ ಮೀಡಿಯ ವ್ಯಾಪ್ತಿಯಲ್ಲಿ ಬರುವ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ತೀವ್ರ ನಿಗಾವಹಿಸಲಾಗುವುದು.

ಚುನಾವಣಾ ನೀತಿ ಸಂಹಿತೆ ಕುರಿತು ಅಪ್ ಲೋಡ್
ಜಿಲ್ಲಾ ಆಡಳಿತವು ತನ್ನ ವೆಬ್‍ಸೈಟ್, ಟ್ವೀಟರ್, ಫೇಸ್‍ಬುಕ್‍ಗಳಲ್ಲಿ ಮತದಾರರ ಜಾಗೃತಿ ಮಾಹಿತಿ, ಸೂಚನೆಗಳು, ಚುನಾವಣಾ ನೀತಿ ಸಂಹಿತೆ ಕುರಿತು ಅಪ್ ಲೋಡ್ ಮಾಡಲಿದೆ. ಕೇಬಲ್‍ಗಳಲ್ಲಿ ಜಾಹಿರಾತು ಪ್ರಸಾರ ಮಾಡಲು ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯಿಂದ ಪ್ರಸಾರ ಮಾಡುವ ಸಿಡಿಯಲ್ಲಿರುವ ವಿವರ, ಪ್ರಸಾರ ವೆಚ್ಚ, ಎಷ್ಟು ಸಮಯ ಪ್ರಸಾರವಾಗುತ್ತದೆ ಎನ್ನುದನ್ನು ಪರಿಶೀಲಿಸಲು ಸಿಡಿಯನ್ನು ನೀಡಿ ಎಂಸಿಎಂಸಿ ಸಮಿತಿಗೆ ಒಪ್ಪಿಸಿ, ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಫೇಸ್ ಬುಕ್, ವೆಬ್ ಸೈಟ್, ಟ್ವೀಟರ್, ವಾಟ್ ಸಾಪ್, ಯು ಟ್ಯೂಬ್, ಗೂಗಲ್ ಟಾಕ್ ಪರಿಶೀಲಿಸಲು ಜಿಲ್ಲಾಡಳಿತವು ತನ್ನ ಅಕೌಂಟ್ ತೆರೆದು ಕಂಪ್ಯೂಟರ್ ತಂತ್ರಜ್ಞಾನ ಹೊಂದಿರುವವರರನ್ನು ನಿಯೋಜಿಸಿ ಇವುಗಳನ್ನು ಪರಿಶೀಲನೆ ಮಾಡಲಾಗುವುದು. ಯಾವುದೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರಚಾರ ಕಂಡು ಬಂದರೆ ದಾಖಲಾತಿಯನ್ನು ಮುದ್ರಿಸಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು.
ರಾಜಕೀಯ ಪಕ್ಷಗಳು ಅನುಮತಿ ಪಡೆಯಬೇಕು
ಪೋಸ್ಟರ್, ಕರ ಪತ್ರಗಳನ್ನು ಮುದ್ರಿಸಲು ರಾಜಕೀಯ ಪಕ್ಷಗಳು ಅನುಮತಿ ಪಡೆಯಬೇಕು. ಪ್ರಿಂಟ್ರಿಂಗ್ ಪ್ರೆಸ್‍ಗಳು ಕಡ್ಡಾಯವಾಗಿ ಮುದ್ರಣ ಮಾಡುವ ಕರ ಪತ್ರಗಳಿಗೆ ವಿಳಾಸ, ವಿವರ, ಸಂಖ್ಯೆಯನ್ನು ನಮೂದಿಸಬೇಕು. ಜಿಲ್ಲಾಡಳಿತಕ್ಕೆ ಬಿಲ್‍ಅನ್ನು ನೀಡಬೇಕು. ತಾಲೂಕ್ ಮಟ್ಟದ ತಂಡಗಳು ಪ್ರತಿ ದಿನ ಜಿಲ್ಲಾ ಮಟ್ಟದ ತಂಡಕ್ಕೆ ಪ್ರತಿ ದಿನ ಸ್ಕಾನ್ ಮಾಡಿ ಪತ್ರಿಕಾ ತುಣುಕುಗಳು ಹಾಗು ವರದಿಯನ್ನು ಕಳುಹಿಸಬೇಕು.

ಚುನಾವಣಾ ವೀಕ್ಷಕರ ಆಗಮನ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಬಳ್ಳಾರಿ ಜಿಲ್ಲೆಯ ಚುನಾವಣಾ ವೀಕ್ಷಕರಾಗಿ ಇಕ್ಬಾಲ್‍ಸಿಂಗ್ ಅವರನ್ನು ನೇಮಿಸಿದ್ದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬಳ್ಳಾರಿಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಲ್ಲಿ ಕೊಠಡಿಯನ್ನು ತೆರೆಯಲಾಗಿದೆ. ಅವರ ಮೊಬೈಲ್ ಸಂಖ್ಯೆ 97112 86007. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದಾಗಿದೆ.

30 ಲೀ. ಅಕ್ರಮ ಶೇಂದಿ ವಶ
ಅನಂತಪುರ ರಸ್ತೆಯ ಚೆಳ್ಳಗುರ್ಕಿ ಕ್ರಾಸ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 403000 ರೂ. ಅಂದಾಜು ಮೌಲ್ಯದ 30 ಲೀ. ಶೇಂದಿ ಹಾಗೂ ಒಂದು ಮಹೀಂದ್ರಾ ಬೊಲೇರೋ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಬಕಾರಿ ಇಲಾಖೆಯ ಉಪ ಆಯುಕ್ತ ಮಹ್ಮದ್ ಅಬೀದ್ ಹುಸೇನ್ ಮಾಹಿತಿ ನೀಡಿದ್ದು, ಅಬಕಾರಿ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ತಾಲೂಕಿನ ಬೇವಿನಹಳ್ಳಿ ಗ್ರಾಮದ ನಾಗರಾಜ್ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications