ಐಎಎಸ್ ನಲ್ಲಿ ದೇಶಕ್ಕೆ 8ನೇ Rank ಬಂದ ಜಿಪಂ ಸಿಇಒನ ರೋಚಕ ಕಥೆ...
ಬಳ್ಳಾರಿ, ಫೆಬ್ರವರಿ 05: ಚಿತ್ರದುರ್ಗದ ನವೋದಯ ಶಾಲೆಯಲ್ಲಿ ನಾನು 8 ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಫೇಲಾಗಿದ್ದೆ, ಆದರೆ ನಂತರ ಅದೇ ಗಣಿತ ಶಿಕ್ಷಕರು ಅತ್ಯಂತ ಇಷ್ಟವಾಗಿ ಅವರ ಪಾಠವನ್ನು ಪ್ರೀತಿಯಿಂದ ಕಲಿತು ಎಸ್ಸೆಸ್ಸೆಲ್ಸಿಯಲ್ಲಿ 99 ಹಾಗೂ ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡೆ ಎಂದು ಬಳ್ಳಾರಿ ಜಿಪಂ ಸಿಇಒ ಕೆ.ನಿತೀಶ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ಜಿಲ್ಲೆಯ ಎಲ್ಲ ಪ್ರೌಢಶಾಲೆ ಮುಖ್ಯಗುರುಗಳು, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂಜನಿಯರಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಎಎಸ್ ಪರೀಕ್ಷೆಯನ್ನು ಗಣಿತದಲ್ಲಿಯೇ ಎದುರಿಸಿ ಇಡೀ ದೇಶಕ್ಕೆ 8ನೇ ಸ್ಥಾನ ಗಳಿಸಿದೆ, ಇದಕ್ಕೆ ಕಾರಣ ನನಗೆ ಕಲಿಸಿದ ಗಣಿತ ಶಿಕ್ಷಕರು ಎಂದು ಕೆ.ನಿತೀಶ್ ಅವರು ಸ್ಮರಿಸಿದರು.

ತಾವು ತಮ್ಮ ಮಕ್ಕಳನ್ನು ಅತ್ಯಂತ ಇಷ್ಟದಿಂದ ಕಲಿಸಿ, ಅವರು ಉನ್ನತ ಸ್ಥಾನಕ್ಕೇರಿದಾಗ ನಿಮ್ಮನ್ನು ಸದಾ ಸ್ಮರಿಸುತ್ತಾರೆ, ಅಂದು ಫೇಲಾಗಿದ್ದ ನನ್ನನ್ನೇ ಐಎಎಸ್ ಅಧಿಕಾರಿಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ಸಮೂಹಕ್ಕೆ ಸೇರುತ್ತದೆ ಎಂದು ತಮ್ಮ ಬಾಲ್ಯವನ್ನು ನೆನೆದರು.
ತಾವು ಖುಷಿಯಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟರೇ ಅದು ಅವರ ತಲೆಗೆ ಹೋಗುತ್ತದೆ, ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಮಗೆ ಯಾವ ಸಹಾಯ, ಸಹಕಾರ ಬೇಕೋ ಅದನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ಜಿಲ್ಲೆ ಅಗ್ರಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕ ಸಮುದಾಯ ಶ್ರಮಿಸಬೇಕು. ಎಲ್ಲ ಮಕ್ಕಳನ್ನು ಪಾಸ್ ಮಾಡುವ ಸಾಮರ್ಥ್ಯ ಹಾಗೂ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಜಿಪಂ ಸಿಇಒ ಕೆ.ನಿತೀಶ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮುಖ್ಯ ಘಟ್ಟ. ತಾವು ವಿದ್ಯಾರ್ಥಿಗಳನ್ನು ಯಾವ ರೀತಿ ಪರಿಣಾಮಕಾರಿ ಬೋಧನೆಯ ಮೂಲಕ ಅಣಿಗೊಳಿಸುತ್ತೀರೋ ಅವರು ಉತ್ತಮ ಫಲಿತಾಂಶ ಪಡೆಯಲು ಸಜ್ಜಾಗುತ್ತಾರೆ. ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅವರನ್ನು ಪರಿಗಣಿಸಿ ಮತ್ತು ಬೋಧಿಸಿ ಎಂದು ಸಲಹೆ ನೀಡಿದರು.
ಶಿಕ್ಷಕರು ಸರಿಯಾಗಿ ಪಾಠ ಮಾಡಿದರೆ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಂಡ ಬಳಿಕ ನಿಮ್ಮನ್ನು ಸ್ಮರಿಸಲಿದ್ದಾರೆ. ಶಿಕ್ಷಕರಿಗೆ ಪ್ರತಿ ವರ್ಷ 10ನೇ ಕ್ಲಾಸ್ ಬರುತ್ತೆ. ಆದರೆ, ವಿದ್ಯಾರ್ಥಿಗಳಿಗೆ ಒಂದೆ ಸಾರಿ ಬರೋದು, ಇದೊಂದು ನಿಮಗೆ ಸದಾವಕಾಶ, ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.












Click it and Unblock the Notifications