Ballari Lok Sabha Election 2024 Results: ಗಣಿನಾಡಿನಲ್ಲಿ ಯಾರಿಗೆ ಗೆಲುವು?
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಹಬ್ಬ ಲೋಕಸಭಾ ಚುನಾವಣೆ. ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಸದ್ಯ ಕೊನೆಯ ಹಂತಕ್ಕೆ ಬಂದಿದೆ. ಜೂನ್ 1 ರಂದು ಏಳನೇ ಹಂತದ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ದೇಶದ ಅಧಿಕಾರದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎನ್ನುವುದು ಬಹಿರಂಗವಾಗಲಿದೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆದಿದೆ. ಉರಿ ಬಿಸಿಲಿನಲ್ಲಿ ಊರೂರು ಸುತ್ತಿ ಪ್ರಚಾರ ಮಾಡಿರುವ ಅಭ್ಯರ್ಥಿಗಳು ಸದ್ಯ ಸೋಲು ಗೆಲುವಿನ ಲೆಕ್ಕಾಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಜೆಪಿ ನಡುವೆ ರಾಜ್ಯದಲ್ಲಿ ನೇರ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.

ಗಣಿನಾಡು ಎಂದೇ ಪ್ರಸಿದ್ಧವಾಗಿರುವ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಹಣಾಹಣಿ ನಿರೀಕ್ಷೆ ಮಾಡಲಾಗಿದೆ. ಬಿಜೆಪಿಯಿಂದ ಬಿ. ಶ್ರೀರಾಮುಲು ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ನಿಂದ ಇ ತುಕಾರಾಂ ಪೈಪೋಟಿ ನೀಡಿದ್ದಾರೆ.
ಬಳ್ಳಾರಿ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಮೊದಲು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಳ್ಳಾರಿ, ಗಣಿಧಣಿಗಳೆಂದೇ ಖ್ಯಾತರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು ಅವರು ಮುನ್ನಲೆಗೆ ಬಂದ ಬಳಿಕ ಬಿಜೆಪಿ ಪ್ರಾಬಲ್ಯ ಪಡೆದಿದೆ.
ಎಂಟು ವಿಧಾನಸಭಾ ಕ್ಷೇತ್ರಗಳು
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು ಕಾಂಗ್ರೆಸ್ ಬಲವನ್ನು ಹೆಚ್ಚಿಸಿದೆ. ಹೂವಿನ ಹಡಗಲಿ (ಎಸ್‌ಸಿ), ಹಗರಿಬೊಮ್ಮನಹಳ್ಳಿ (ಎಸ್‌ಸಿ), ವಿಜಯನಗರ, ಕಂಪ್ಲಿ (ಎಸ್‌ಟಿ), ಬಳ್ಳಾರಿ (ಎಸ್‌ಟಿ), ಬಳ್ಳಾರಿ ನಗರ, ಸಂಡೂರು (ಎಸ್‌ಟಿ), ಕುಡ್ಲಿಗಿ (ಎಸ್‌ಟಿ) ವಿಧಾನಸಭಾ ಕ್ಷೇತ್ರಗಳು ಬಳ್ಳಾರಿ ಲೋಕಸಭಾ ವ್ಯಾಪ್ತಿಗೆ ಬರುತ್ತವೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವೈ.ದೇವೇಂದ್ರಪ್ಪ 55,707 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರನ್ನು ಸೋಲಿಸಿದ್ದರು. ದೇವೇಂದ್ರಪ್ಪ 6,16,388 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ 5,60,681 ಮತಗಳನ್ನು ಪಡೆದಿದ್ದರು.
ಶೇಕಡಾ 73.59 ರಷ್ಟು ಮತದಾನ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇಕಡಾ 73.59 ರಷ್ಟು ಮತದಾನವಾಗಿದೆ. ಒಟ್ಟು 18,84,040 ಮತದಾರರಿದ್ದು, 13,86,553 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ನರೇಂದ್ರ ಮೋದಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ ಕೇಳಿದ್ದಾರೆ, ಗಾಲಿ ಜನಾರ್ಧನ ರೆಡ್ಡಿ ಕೂಡ ಬಿಜೆಪಿಗೆ ಬೆಂಬಲ ಕೊಟ್ಟಿರುವುದು ಶ್ರೀರಾಮುಲು ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಂತಹ ನಾಯಕರು ತುಕಾರಾಂ ಪರ ಪ್ರಚಾರ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಅಂತರ ಹೆಚ್ಚೇನೂ ಇರಲಿಲ್ಲ, ಇದು ಕಾಂಗ್ರೆಸ್ ವಿಶ್ವಾಸವನ್ನು ಹೆಚ್ಚಿಸಿದೆ. ಇನ್ನು ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದ್ದು, ಜನ ಯಾರ ಪರವಾಗಿದ್ದಾರೆ ಎನ್ನುವುದು ತಿಳಿಯಲಿದೆ.












Click it and Unblock the Notifications