ಅಕಾಲಿಕ ಮಳೆ; ಬಳ್ಳಾರಿಯಲ್ಲಿ ಮೆಣಸು ಸೇರಿ ವಿವಿಧ ಬೆಳೆಗೆ ಹಾನಿ
ಬಳ್ಳಾರಿ, ನವೆಂಬರ್ 22; ಬಳ್ಳಾರಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆಯನ್ನು ಆರಂಭಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅಧಿಕಾರಿಗಳ ಜೊತೆ ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಅಕಾಲಿಕವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಹಾನಿಯಾಗಿದೆ. ಮನೆಗಳು ಕುಸಿತವಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ.
ಮಳೆಯ ಪರಿಣಾಮ 230183 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಸಮೀಕ್ಷೆಯನ್ನು ಎರಡು ದಿನಗಳಿಂದ ನಡೆಸುತ್ತಿದ್ದಾರೆ.

ಭತ್ತ 11563 ಹೆಕ್ಟೇರ್, 1209 ಹೆಕ್ಟೇರ್ ಕಡಲೆ, 66 ಹೆಕ್ಟೇರ್ ಜೋಳ, 170 ಹೆಕ್ಟೇರ್ ಹತ್ತಿ, 9 ಹೆಕ್ಟೇರ್ ಕಬ್ಬು ಬೆಳೆ ಸೇರಿದಂತೆ ಒಟ್ಟು 13017 ಹೆಕ್ಟೇರ್ ಬೆಳೆಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಬೆಳೆಗಳಾದ ಮೆಣಸಿನಕಾಯಿ 10032 ಹೆಕ್ಟೇರ್, 80 ಹೆಕ್ಟೇರ್ ಈರುಳ್ಳಿ ಮತ್ತು 24 ಹೆಕ್ಟೇರ್ ಪಪ್ಪಾಯ, 6 ಹೆಕ್ಟೇರ್ ಬಾಳೆ ಬೆಳೆ ಸೇರಿದಂತೆ ಒಟ್ಟು 10166 ಹೆಕ್ಟೇರ್ ಬೆಳೆಹಾನಿಯಾಗಿದೆ. 230183 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
210 ಮನೆಗಳಿಗೆ ಹಾನಿ; ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಂದಾಜು 40 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಬಟ್ಟೆ, ಆಹಾರ ಸಾಮಗ್ರಿಗಳಿಗೆ ಹಾನಿಯಾಗಿದೆ. 210 ಮನೆಗಳು ಭಾಗಶಃ ಹಾನಿ ಮತ್ತು ಒಂದು ಮನೆ ಸಂಪೂರ್ಣ ಹಾನಿಯಾಗಿದೆ. ಒಂದು ಜಾನುವಾರು ಸೇರಿದಂತೆ ಒಟ್ಟು 106 ಪ್ರಾಣಿಗಳು ಅಕಾಲಿಕ ಮಳೆಗೆ ಸಾವನ್ನಪ್ಪಿವೆ.
ಅಕಾಲಿಕವಾಗಿ ಸುರಿದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಬಳ್ಳಾರಿ ಜಿಲ್ಲಾಡಳಿತ ಅಗತ್ಯವಿರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಬಳ್ಳಾರಿ ತಾಲೂಕಿನ ಮೋಕಾ ಸರಕಾರಿ ಪ್ರೌಢಶಾಲೆ, ಶ್ರೀಧರಗಡ್ಡೆ-ಗುಡಾರನಗರದ ಸರಕಾರಿ ಪ್ರಾಥಮಿಕ ಶಾಲೆ, ಬಸರಕೋಡ ಸಮುದಾಯ ಭವನ ಹಾಗೂ ಕಂಪ್ಲಿ ಪಟ್ಟಣದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರಗಳಿವೆ.
215 ಮಕ್ಕಳು ಸೇರಿದಂತೆ 571 ಜನರು ಅಂದರೇ 125 ಕುಟುಂಬಗಳು ಕಾಳಜಿ ಕೇಂದ್ರಗಳಲ್ಲಿದ್ದಾರೆ. ಅಲ್ಲಿರುವ ಜನರಿಗೆ ಊಟೋಪಚಾರ ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ. ಇನ್ನೂ ಅಗತ್ಯವಿರುವ ಕಡೆ ಕಾಳಜಿಕೇಂದ್ರಗಳು ತೆರೆದು ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ರೈತರ ಅಹವಾಲು ಸ್ವೀಕಾರ; ಜಿಲ್ಲಾಧಿಕಾರಿಗಳು ಬಳ್ಳಾರಿ ತಾಲೂಕಿನ ಕಪಗಲ್ಲು, ಬಿ. ಡಿ. ಹಳ್ಳಿ, ಯರ್ರಗುಡಿ, ಸಿರಿಗೇರಿ ಕ್ರಾಸ್ ಸೇರಿದಂತೆ ಸಿರಗುಪ್ಪ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಅಕಾಲಿಕವಾಗಿ ಸುರಿದ ಮಳೆಯಿಂದ ಉಂಟಾದ ಅಪಾರ ಪ್ರಮಾಣದ ಬೆಳೆಹಾನಿಯನ್ನು ವೀಕ್ಷಿಸಿದರು.
ಭತ್ತ, ಮೆಣಸಿನಕಾಯಿ, ಕಡಲೆ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಅಕಾಲಿಕ ಮಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈತರು ಮಳೆಯಿಂದ ಉಂಟಾದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಹವಾಲುಗಳನ್ನು ಸಲ್ಲಿಸಿದರು.
"ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿಸಮೀಕ್ಷೆ ಆರಂಭಿಸಲಾಗಿದ್ದು, ಹಾನಿಗೊಳಗಾದ ಬೆಳೆಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು" ಎಂದು ರೈತರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ನದಿ ಪಾತ್ರದ ಜನರಿಗೆ ಎಚ್ಚರಿಕೆ; ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಜಲಾಶಯ ಭರ್ತಿಯಾಗಿದೆ.
ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತದೆ. 1 ಲಕ್ಷ ಕ್ಯುಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಟ್ಟಲ್ಲಿ ಕಂಪ್ಲಿ ಮತ್ತು ಸಿರಗುಪ್ಪ ತಾಲೂಕಿನ ನದಿದಂಡೆ ಗ್ರಾಮದಲ್ಲಿ ನೀರು ಬರುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.











Click it and Unblock the Notifications