ಬಳ್ಳಾರಿ; ಬರ ನಿರ್ವಹಣೆ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ
ಬಳ್ಳಾರಿ, ಸೆಪ್ಟೆಂಬರ್ 18; ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಣೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿಯೂ ಬರದ ಛಾಯೆ ಆವರಿಸಿದೆ. ತೀವ್ರ ಬರಪೀಡಿತ ತಾಲೂಕುಗಳಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು, ಶಿರಗುಪ್ಪ, ಕುರುಗೋಡು, ಕಂಪ್ಲಿ ಸೇರಿವೆ. ಬರ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಭೆಯಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಗಳು; ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಬರ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ತಾಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದ್ದು, ಸಮಿತಿಯ ನೋಡೆಲ್ ಅಧಿಕಾರಿಗಳು ತಾಲೂಕು ಹಾಗೂ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ದನ-ಕರುಗಳಿಗೆ ಮೇವು ಸಮಸ್ಯೆ ಹಾಗೂ ಇತರೆ ಸಮಸ್ಯೆ ಕುರಿತು ಮಾಹಿತಿ ವರದಿ ಮಾಡಲಿದ್ದಾರೆ" ಎಂದರು.
"ಈಗಾಗಲೇ ಆಯಾ ತಾಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಮೊದಲನೇ ಹಂತದ ಬರ ಸಮೀಕ್ಷೆ ನಡೆಸಿದ್ದು, ಮತ್ತೊಮ್ಮೆ ಬೆಳೆ ಪರಿಸ್ಥಿತಿ ಕುರಿತು ನಿಜ ಸಮೀಕ್ಷಾ ವರದಿ ನಡೆಸಿ ಕಾಲಮಿತಿಯಲ್ಲಿ ಮಾಹಿತಿ ಸಿದ್ಧಪಡಿಸಬೇಕು. ಕೇಂದ್ರದಿಂದ ಬರ ಸಮೀಕ್ಷೆ ತಂಡ ಬರಲಿದೆ. ಯಾವ ವಿಧದ ಭೂಮಿ, ಬೆಳೆ ಹಾಗೂ ಎಷ್ಟು ವ್ಯಾಪ್ತಿಯಿದೆ ಎಂಬುದರ ಬರ ಸಮೀಕ್ಷೆ ಮಾಹಿತಿಯನ್ನು ಶೀಘ್ರವಾಗಿ ಜಿಲ್ಲಾಡಳಿತಕ್ಕೆ ನೀಡಬೇಕು. ಸೆಪ್ಟೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು" ಎಂದು ಹೇಳಿದರು.
"ಹೆಚ್‍ಎಲ್‍ಸಿ ಮತ್ತು ಎಲ್‍ಎಲ್‍ಸಿ ಕಾಲುವೆಗಳಿಗೆ ಈಗಾಗಲೇ ನೀರಿ ಹರಿಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮವಹಿಸಬೇಕು. ಈ ಕುರಿತು ಆಯಾ ತಾಲೂಕು ತಹಶೀಲ್ದಾರ್ ನೋಡಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾದಲ್ಲಿ ನೀರಿನ ಟ್ಯಾಂಕರ್ ಇರಿಸಿಕೊಳ್ಳಬೇಕು. ಜಿಲ್ಲೆಯ 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಎಸ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸದ ಕೊಳವೆಬಾವಿಗಳನ್ನು ಗುರುತಿಸಿ, ಮರಳಿ ಪುನಃಶ್ಚೇತನಗೊಳಿಸಬೇಕು" ಎಂದು ನಿರ್ದೇಶನ ನೀಡಿದರು.
ರೈತರಿಗೆ ಅಭಯ; ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, "ಜಿಲ್ಲೆಯಲ್ಲಿ ರೈತರು ಯಾವುದೇ ಕಾರಣಕ್ಕೂ ದೃತಿಗೆಡಬಾರದು. ಬ್ಯಾಂಕ್‍ಗಳಿಂದ ಸಾಲಪಡೆದ ರೈತರಿಗೆ ಲೇವಾದೇವಿದಾರರಿಂದ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಮತ್ತು ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗದಂತೆ ಜಾಗ್ರತೆ ವಹಿಸಬೇಕು" ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮೇವಿನ ಕೊರತೆ ಇರುವುದಿಲ್ಲ, ಅಗತ್ಯ ಮೇವಿನ ದಾಸ್ತಾನು ಇರಿಸಿಕೊಳ್ಳುವಂತೆ ಸೂಚಿಸಲಾಯಿತು. ಪ್ರತಿ ವಾರದಲ್ಲಿ ಒಂದು ದಿನ ನಿಗದಿಪಡಿಸಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಮತ್ತು ಗ್ರಾಮಗಳ ಸಮಸ್ಯೆಗಳನ್ನು ವರದಿ ಮಾಡಿ ಜಿಲ್ಲಾಡಳಿತ ಗಮನಕ್ಕೆ ತರಲು ಕ್ರಮವಹಿಸಬೇಕು ಎಂದರು.












Click it and Unblock the Notifications