Bird Flu: ಬಳ್ಳಾರಿಯಲ್ಲಿ ಹಕ್ಕಿ ಜ್ವರ, ಜನರು ಆತಂಕಪಡುವ ಅಗತ್ಯವಿಲ್ಲ
ಬಳ್ಳಾರಿ, ಮಾರ್ಚ್ 04: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರ (ಹಕ್ಕಿ ಜ್ವರ)ದ ಆತಂಕ ಎದುರಾಗಿದೆ. ಹಕ್ಕಿ ಜ್ವರ ತಡೆಯಲು ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಅಸಹಜವಾಗಿ ಕೋಳಿಗಳು ಮರಣ ಹೊಂದಿದ ಬಳಿಕ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಮಾರುಕಟ್ಟೆಯಲ್ಲಿ ಚಿಕನ್ ದರದಲ್ಲಿಯೂ ಇಳಿಕೆಯಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು. ಬಳಿ ಮಾತನಾಡಿದ ಅವರು, "ಹಕ್ಕಿ ಜ್ವರವು ಹೆಚ್5ಎನ್1 ವೈರಸ್‌ನಿಂದ ಪಕ್ಷಿಗಳಿಗೆ ಹರಡುವ ಖಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ" ಎಂದು ಹೇಳಿದರು.

"ಸಾಮಾನ್ಯವಾಗಿ ಶೀಥಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡು ಸಂಭವವಿದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ" ಎಂದು ತಿಳಿಸಿದರು.
ಬೇಯಿಸಿ ನಂತರ ಸೇವಿಸಿ: ಹಕ್ಕಿ ಜ್ವರದ ಹಿನ್ನಲೆಯಲ್ಲಿ ಜನರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿಗೂ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಹಾಗಾಗಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು.
ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಫೆಬ್ರವರಿ 23ರಂದು ಕುರೇಕುಪ್ಪ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮಾಡಿದ ಅಸಿಲ್ ಮತ್ತು ಕಾವೇರಿ ತಳಿಯ ಕೋಳಿಗಳಿಗೆ ಕೋಳಿ ಶೀತ ಜ್ವರ ರೋಗದ ಲಕ್ಷಣ ಕಂಡುಬಂದು ಕೆಲವು ಕೋಳಿಗಳು ಮರಣ ಹೊಂದಿದ್ದವು.
ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಹೆಚ್ ಮತ್ತು ವಿಬಿಗೆ ಮರಣ ಹೊಂದಿದ ಕೋಳಿಗಳ ಮಾದರಿ ಕಳುಹಿಸಲಾಗಿತ್ತು. ಫೆಬ್ರವರಿ 25ರಂದು ಭೋಪಾಲ್‌ನ ಐಸಿಎಆರ್ ರೋಗ ದೃಢೀಕರಣವಾಗಿರುವ ವರದಿ ಬಂದ ನಂತರ ಈ ಕುರಿತು ಘೋಷಣೆ ಮಾಡಲಾಯಿತು. ಆಗ ಮಾರ್ಗಸೂಚಿಯಂತೆ ಇರುವ 2,400 ಕೋಳಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.
ಫೆಬ್ರವರಿ 28 ರಂದು ಕಪ್ಪಗಲ್ ಗ್ರಾಮದಲ್ಲಿ ಇಂಟಿಗ್ರೇಷನ್ ಪದ್ಧತಿಯಲ್ಲಿ ಮಾಂಸದ ಕೋಳಿಗಳನ್ನು ಸಾಕಾಣಿಕೆ ಮಾಡುವ ಕೇಂದ್ರದಲ್ಲಿ ಅಸಹಜವಾಗಿ ಕೋಳಿಗಳು ಮರಣ ಹೊಂದಿದ್ದವು. ಪಶು ಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಒಟ್ಟು 15,000 ಕೋಳಿಗಳ ಪೈಕಿ 8,000 ಕೋಳಿಗಳು ಮರಣ ಹೊಂದಿದ್ದವು. ಮರಣ ಹೊಂದಿದ ಕೋಳಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 74 ಮಾಂಸದ ಕೋಳಿ (ಫಾರಂ) ಹಾಗೂ 14 ಮೊಟ್ಟೆ ಕೋಳಿ ಸಾಕಾಣಿಕೆ ಕೇಂದ್ರಗಳಿವೆ ಹಾಗೂ 1,30,221 ಹಿತ್ತಲ ಕೋಳಿ ಇವೆ. ಮರಣ ಹೊಂದಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಮತ್ತು ಕೋಳಿ ಶೀತ ಜ್ವರ ಕಂಡಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ವಾಹನಗಳ ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲು ಕ್ರಮವಹಿಸಲಾಗಿದೆ.
ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ: ಬೆಂಗಳೂರಿನ ಐಎಹೆಚ್ ಮತ್ತು ವಿಬಿ ಪ್ರಯೋಗಾಲಯದ ವಿಜ್ಞಾನಿಗಳು ಮತ್ತು ಪಶುಪಾಲನಾ ಇಲಾಖೆಯ ನಿರ್ದೇಶಕರು ಬಳ್ಳಾರಿಗೆ ಭೇಟಿ ನೀಡಿ ಹಕ್ಕಿ ಜ್ವರದ ನಿಯಂತ್ರಣ ಮಾರ್ಗಸೂಚಿಯಂತೆ ಕಟ್ಟೆಚ್ಚರ ವಹಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ 13 ಕ್ಷೀಪ್ರ ಪ್ರತಿಕ್ರಿಯೆ ತಂಡಗಳನ್ನು ರಚನೆ ಮಾಡಲಾಗಿದೆ. ನೆರೆ ರಾಜ್ಯದಿಂದ ಕೋಳಿ ಶೀತ ಜ್ವರ ಪ್ರವೇಶವಾಗದಂತೆ ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ.












Click it and Unblock the Notifications