ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಸೋಲಾಗಿದ್ದಕ್ಕೆ ಕಣ್ಣೀರಿಟ್ಟ ಅಭಿಮಾನಿಗಳು
ಬಳ್ಳಾರಿ, ಮೇ, 16: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿತ್ತು. ಈ ಹಿನ್ನೆಲೆ ಸೋತ ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರ ಮನೆಗೆ ಧಾವಿಸುತ್ತಿರುವ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನಿಗೆ ಬಂದಿರುವ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಹೀಗೆ ಕಣ್ಣೀರು ಹಾಕುತ್ತಿರುವ ಬೆಂಬಲಿಗರಿಗೆ ಶ್ರೀರಾಮುಲು ಅವರೇ ಸಾಂತ್ವನ ಹೇಳಿ ಕಳುಹಿಸುತ್ತಿದ್ದಾರೆ.
ಬೆಂಬಲಿಗರಿಗೆ ಶ್ರೀರಾಮುಲು ಸಾಂತ್ವನ
ಹೀಗೆ ಕಣ್ಣೀರು ಹಾಕುತ್ತಿರುವ ಬೆಂಬಲಿಗರಿಗೆ ಶ್ರೀರಾಮುಲು ಅವರೇ ಸಾಂತ್ವನ ಹೇಳಿ ಕಳುಹಿಸುತ್ತಿದ್ದಾರೆ. ಫಲಿತಾಂಶ ಪ್ರಕಟವಾದ ದಿನವೇ ಶ್ರೀರಾಮುಲು ಅವರು ಬಳ್ಳಾರಿ ತಾಲೂಕಿನ ಮೋಕಾಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಬೆಂಬಲಿಗನೊಬ್ಬ ಶ್ರೀರಾಮುಲು ಕಾಲಿಗೆರಗಿ ಕಣ್ಣೀರು ಹಾಕಿದಾಗ ಸುತ್ತ ಅಲ್ಲಿ ನೆರೆದಿದ್ದವರಲ್ಲಿ ಹೆಪ್ಪುಗಟ್ಟಿದ ದುಃಖ ಕಣ್ಣೀರಾಯಿತು. ಬೆಂಬಲಿಗರನ್ನು ಕಂಡು ಭಾವೋದ್ವೇಗಕ್ಕೆ ಒಳಗಾದ ಶ್ರೀರಾಮುಲು ಅವರೂ ಕಣ್ಣೀರು ಹಾಕಿದರು.

ಕಣ್ಣೀರು ಹಾಕಿದ ವಿಡಿಯೋ ವೈರಲ್
ಶ್ರೀರಾಮುಲು ಅವರೂ ಕಣ್ಣೀರು ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿ 30,000 ಮತಗಳ ಅಂತರದಿಂದ ಶಾಸಕ ನಾಗೇಂದ್ರ ವಿರುದ್ಧ ಶ್ರೀರಾಮುಲು ಸೋಲು ಕಂಡಿದ್ದಾರೆ. 1999ರಲ್ಲಿ ರಾಜಕೀಯ ಜೀವನಕ್ಕೆ ಬಂದಿರುವ ಶ್ರೀರಾಮುಲು ಮೊದಲ ಬಾರಿ ಸೋತರೂ, 2004ರಿಂದ ಈವರೆಗೆ ಸೋತಿರಲಿಲ್ಲ.
2004ರಲ್ಲ ಬಳ್ಳಾರಿ ನಗರ, 2008, 2011ರ ಉಪಚುನಾವಣೆ, 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಕ್ಷೇತ್ರ ಬಿಟ್ಟು ಎಂಪಿ ಆಗಿದ್ದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದು ಇದೀಗ ಸ್ವಕ್ಷೇತ್ರದಲ್ಲಿ ಸೋಲುಂಡಿದ್ದಾರೆ.
ರಾತ್ರೋ ರಾತ್ರಿ ಪಕ್ಷ ಬದಲಾವಣೆ
ಮಾಜಿ ಶಾಸಕರೊಬ್ಬರು ರಾತ್ರೋ ರಾತ್ರಿ ಪಕ್ಷ ಬದಲಾವಣೆ ಮಾಡಿ ಸ್ಪರ್ಧೆ ಮಾಡಿದ್ದು, ಅವರಿಗೆ ಜನ ಕ್ಯಾರೆ ಅಂದಿಲ್ಲ, ಇದಕ್ಕಿಂತ ಅಚ್ಚರಿ ಎಂದರೆ ಒಬ್ಬ ಮಾಜಿ ಶಾಸಕ ನೋಟಾಗಿಂತ ಕಡಿಮೆ ಮತ ಪಡೆದಿರುವುದು. ಹೌದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರ ಇಂತಹ ಅಚ್ಚರಿಯ ತೀರ್ಪು ಕೊಟ್ಟಿದ್ದಾನೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಅನಿಲ್ ಲಾಡ್, ಟಿಕೆಟ್ ಸಿಗದ ಕಾರಣ ರಾತ್ರೋ ರಾತ್ರಿ ಜೆಡಿಎಸ್‌ಗೆ ಸೇರ್ಪಡೆಯಾಗಿ ಟಿಕೆಟ್ ಪಡೆದುಕೊಂಡಿದ್ದರು. ಬೇರೆ ಅಭ್ಯರ್ಥಿಗೆ ಅದಾಗಲೆ ಟಿಕೆಟ್ ಘೋಷಣೆ ಮಾಡಿದ್ದರೂ ಅದನ್ನು ತಪ್ಪಿಸಿ ಅನಿಲ್ ಲಾಡ್‌ಗೆ ಬಿ ಫಾರಂ ನೀಡಲಾಗಿತ್ತು, ಬಿಜೆಪಿ, ಕಾಂಗ್ರೆಸ್‌ಗೆ ಬಲಿಷ್ಠ ಪೈಪೋಟಿ ನೀಡ್ತೇನೆ ಅಂದುಕೊಂಡಿದ್ದ ಅನಿಲ್ ಲಾಡ್‌ಗೆ ದೊಡ್ಡ ಶಾಕ್ ಎದುರಾಗಿತ್ತು.
ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಅನಿಲ್ ಲಾಡ್ ಈ ಬಾರಿ 610 ಮತಗಳನ್ನು ಪಡೆದಿದ್ದರೆ, ನೋಟಾಗೆ 983 ಮತಗಳು ಬಿದ್ದಿವೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ 86440 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣ 48577 ಮತ ಪಡೆದು 2ನೇ ಸ್ಥಾನ ಪಡೆದರೆ, ಬಿಜೆಪಿಯ ಸೋಮಶೇಖರ ರೆಡ್ಡಿ 37155 ಮತಗಳನ್ನು ಪಡೆದಿದ್ದಾರೆ.
ಅನಿಲ್ ಲಾಡ್ 2018ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾಗ ಬರೋಬ್ಬರಿ 60,434 ಮತಗಳನ್ನು ಪಡೆದುಕೊಂಡಿದ್ದರು. ಆ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮೊಹಮದ್ ಇಕ್ಬಾಲ್ ಹೊತ್ತೂರ್ 6255 ಮತಗಳನ್ನು ಪಡೆದುಕೊಂಡಿದ್ದರು. ಕಳೆದ ಬಾರಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು.












Click it and Unblock the Notifications