ಬಳ್ಳಾರಿಗೆ ಬಂದ್ರು ರೆಡ್ಡಿ, ಅಂದುಕೊಂಡಿದ್ದು ಬೇರೆ, ಆಗಿದ್ದು ಬೇರೆ!
ಬಳ್ಳಾರಿ, ಜನವರಿ 27: ಕರ್ನಾಟಕದಲ್ಲಿ ಮತ್ತೆ ಬಳ್ಳಾರಿ ರಾಜಕೀಯದ ಕುರಿತು ಚರ್ಚೆಗಳು ಆರಂಭವಾಗಿವೆ. ಅದಕ್ಕೆ ಕಾರಣ ಮತ್ತೆ ಕುಚಿಕು ಗೆಳೆಯರಾದ ಬಿ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ. ಸಂಡೂರು ಉಪ ಚುನಾವಣೆ ಬಳಿಕ ಗೆಳೆಯರ ನಡುವೆ ಅಸಮಾಧಾನ ಮೂಡಿದೆ. ಕಳೆದ ವಾರದ ಮಾಜಿ ಸಚಿವರಿಬ್ಬರೂ ಪತ್ರಿಕಾಗೋಷ್ಠಿ ನಡೆಸಿ ಟೀಕೆಗಳನ್ನು ಮಾಡಿದ್ದಾರೆ. ಬಿ. ಶ್ರೀರಾಮುಲು ನಿವಾಸದಿಂದ ಜನಾರ್ದನ ರೆಡ್ಡಿ ನಿವಾಸಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಗೇಟ್ ಬಂದ್ ಆಗಿದೆ.
2024ರ ಸೆಪ್ಟೆಂಬರ್‌ನಲ್ಲಿ ಗಂಗಾವತಿ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ಕೊಟ್ಟಿತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಅವರು ಬಳ್ಳಾರಿಗೆ ಭೇಟಿ ನೀಡದಂತೆ ಇದ್ದ ನಿರ್ಬಂಧ ತೆರವುಗೊಳಿಸಿತು. ಆಗಲೇ ರಾಜ್ಯದಲ್ಲಿ ಬಳ್ಳಾರಿ ರಾಜಕೀಯದ ಕುರಿತು ಚರ್ಚೆಗಳು ಆರಂಭವಾದವು.

ಸಂಡೂರು ಉಪ ಚುನಾವಣೆಗೂ ಮುನ್ನ ಬಳ್ಳಾರಿಗೆ ಜನಾರ್ದನ ರೆಡ್ಡಿ ಪ್ರವೇಶ ಬಿಜೆಪಿ ವಲಯದಲ್ಲಿ ಉತ್ಸಾಹ ಹೆಚ್ಚಿಸಿತು. ಗೆಳೆಯರಾದ ಜನಾರ್ದನ ರೆಡ್ಡಿ ಶ್ರೀರಾಮುಲು ಸೇರಿ ಉಪ ಚುನಾವಣೆ ಗೆಲ್ಲಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ವಿರುದ್ಧ ಸೋಲು ಕಂಡರು.
ಬಿಜೆಪಿಗರಿಗೆ ಧರ್ಮ ಸಂಕಟ; ಬಳ್ಳಾರಿಯಲ್ಲಿ ಬಿಜೆಪಿಯ ವರ್ಚಸ್ಸು ಮೊದಲಿನಂತಿಲ್ಲ. ಬಿ. ಶ್ರೀರಾಮುಲು 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಸದ್ಯ ಯಾವುದೇ ಅಧಿಕಾರ ಕೈಯಲ್ಲಿ ಇಲ್ಲ.
ಇನ್ನು ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕರು. ಈಗ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ ಬಳ್ಳಾರಿಯಲ್ಲಿ ಬಿಜೆಪಿ ಗತವೈಭವ ಮರಳಿ ತರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇಬ್ಬರು ಗೆಳೆಯರ ನಡುವೆ ನಾವು ಯಾರ ಪರವಾಗಿ ನಿಲ್ಲಬೇಕು? ಎಂದು ಬಿಜೆಪಿ ಕಾರ್ಯಕರ್ತರು ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.
ಜನಾರ್ದನ ರೆಡ್ಡಿ ಜೈಲಿಗೆ ಹೋದ ಕಾಲದಿಂದ ಬಳ್ಳಾರಿಯಲ್ಲಿ ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಬಿ. ಶ್ರೀರಾಮುಲು ಬೆಳೆಸಿದ್ದಾರೆ. ಕಷ್ಟ ಎಂದು ಹೇಳಲು ಹೋದರೆ ಸುಲಭವಾಗಿ ಕೈಗೆ ಸಿಗುತ್ತಾರೆ. ಆದರೆ ದೋಸ್ತಿಗಳ ನಡುವಿನ ಈಗಿನ ಪರಿಸ್ಥಿತಿ ಬಳ್ಳಾರಿ ಬಿಜೆಪಿ ಎರಡು ಭಾಗವಾಯಿತೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯ 8 ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ವಶವಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಇ. ತುಕಾರಾಂ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಬಿಜೆಪಿ ಮಂಕಾಗಿದೆ. ಪಕ್ಷವನ್ನು ಮುನ್ನಡೆಸಬೇಕಾದ ಇಬ್ಬರು ನಾಯಕರ ನಡುವೆ ಅಸಮಾಧಾನ ಹೆಚ್ಚಾಗಿದ್ದು, ಬಿಜೆಪಿಯ ಮುಂದಿನ ಪರಿಸ್ಥಿತಿ ಬಗ್ಗೆ ಚಿಂತೆ ಮಾಡುವಂತೆ ಮಾಡಿದೆ.
ಜನಾರ್ದನ ರೆಡ್ಡಿಗೆ ಹೋಲಿಕೆ ಮಾಡಿದರೆ ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು. ಜನಾರ್ದನ ರೆಡ್ಡಿ ಸೇರಿದಂತೆ ಯಾವ ನಾಯಕರನ್ನು ಶ್ರೀರಾಮುಲು ಬೆಳೆಸಲಿಲ್ಲ ಎಂದು ರೆಡ್ಡಿ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ.
ಹಿಂದಿನಿಂದಲೂ ಬಿಜೆಪಿ ಜೊತೆಗಿರುವ ನಾಯಕರು, ಮುಖಂಡರು ಈಗಲೂ ಬಿ. ಶ್ರೀರಾಮುಲು ಜೊತೆಗಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ ಬಳಿಕ ಜನಾರ್ದನ ರೆಡ್ಡಿ ಜೊತೆಯಾದ ನಾಯಕರು ಅವರ ಪರವಾಗಿ ನಿಂತಿದ್ದಾರೆ. ಇಬ್ಬರೂ ನಾಯಕರು ಒಗ್ಗಟ್ಟಾಗುವುದು ಯಾವಾಗ?. ಬಳ್ಳಾರಿಯಲ್ಲಿ ಬಿಜೆಪಿಯ ಮುಂದಿನ ಸ್ಥಿತಿ ಏನು? ಎಂಬುದು ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications