Lok sabha election 2024: ಜೆಡಿಎಸ್, ಬಿಜೆಪಿ ಮೈತ್ರಿ ಯಾವುದೇ ಪರಿಣಾಮ ಬೀರಲ್ಲ: ಸಚಿವ ಬಿ.ನಾಗೆಂದ್ರ
ಬಳ್ಳಾರಿ, ಸೆಪ್ಟೆಂಬರ್, 25: ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಮೊದಲೇ ಹೇಳಿದ್ದು ಇದೀಗ ಬೆಳಕಿಗೆ ಬಂದಿದೆ. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೆಂದ್ರ ಅವರು ಹೇಳಿದರು.
ಜನತಾ ದರ್ಶನ ಕಾರ್ಯಕ್ರಮದ ಮುನ್ನ ತಮ್ಮನ್ನು ಭೇಟಿಯಾಗಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವರು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿರುದ್ಧ ಹರಿಹಾಯ್ದರು. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಕೇವಲ ಮೂರು-ನಾಲ್ಕು ಸ್ಥಾನದಲ್ಲಿ ಪರಿಣಾಮ ಬೀರಬಹುದು. ಎರಡು ಪಕ್ಷವನ್ನು ಮೆಟ್ಟಿ ನಿಂತು ರಾಜ್ಯದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನ ಗೆಲ್ಲುತ್ತೇವೆ ಎಂದು ಸಚಿವ ನಾಗೇಂದ್ರ ತಿಳಿಸಿದರು.

ಜೆಡಿಎಸ್ ಬಿಟ್ಟು ಬರುವವರಿಗೆ ನೇರವಾದ ಆಹ್ವಾನ ನೀಡಿದ ಸಚಿವ ನಾಗೇಂದ್ರ ಅವರು, ಜಾತ್ಯಾತೀತ ಪಕ್ಷ ಎಂದು ಯಾರು ಯಾರು ಸೇರಿದ್ದಾರೆ ಅಂತಾ ಎಲ್ಲರಿಗೂ ಗೊತ್ತಾಗಿದೆ. ಕೋಮುವಾದಿ ಪಕ್ಷದ ಜೊತೆ ಹೋದಾಗ ಜೆಡಿಎಸ್ ನಿಲುವು ಜನರಿಗೆ ಗೊತ್ತಾಗಿದೆ. ಸಿಎಂ ಇಬ್ರಾಹಿಂ ಪಕ್ಷ ಬಿಡುವ ವಿಚಾರ ಅವರ ಸಾಮಾಜಿಕ ಕಳಕಳಿ ಮತ್ತು ನಿಲುವು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಇಬ್ರಾಹಿಂ ಸೇರಿದಂತೆ ಯಾರೇ ಬಂದರೂ ಸ್ವಾಗತವಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮುಂದಿನ ಲೋಕಸಭೆ ಚುನಾವಣೆ ಕುರಿತಂತೆ ಮಾತನಾಡಿದ ಸಚಿವ ನಾಗೇಂದ್ರ ಅವರು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಚಿವ, ಶಾಸಕರನ್ನು ಕಣಕ್ಕಿಳಿಸುವ ವಿಚಾರ ಪಕ್ಷದ ನಿರ್ಧಾರಕ್ಕೆ ಬಿಟ್ಟದ್ದು ಎಂದ ಅವರು, ಇರುವ ಶಾಸಕ, ಸಚಿವರನ್ನು ಯಾಕೆ ಕಣಕ್ಕೆ ಇಳಿಸಬೇಕು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ. ಎಲ್ಲರೂ ಶಕ್ತಿವಂತರಾಗಿದ್ದಾರೆ. ಅವಕಾಶ ವಂಚಿತರಿಗೆ ಟಿಕೆಟ್ ನೀಡಲು ಪಕ್ಷ, ಎಐಸಿಸಿ ವರಿಷ್ಠರು ಮತ್ತು ರಾಜ್ಯ ನಾಯಕರು ಯೋಚನೆ ಮಾಡುತ್ತಿದ್ದಾರೆ. ಸಿಎಂ ಸೇರಿದಂತೆ 34 ಸಚಿವರು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಉಪಮುಖ್ಯಮಂತ್ರಿ ಬೇಡ. ಒಬ್ಬರೇ ಇರಲಿ ಎಂದರು.
ಪಕ್ಷದ ತೀರ್ಮಾನದಂತೆ ಒಬ್ಬರೇ ಸಿಎಂ, ಒಬ್ಬರೇ ಡಿಸಿಎಂ ಇರುತ್ತಾರೆ. ಈ ಟ್ರೈಯಲ್ ರನ್ ಸಕ್ಸೆಸ್ ಆಗಿದೆ. ಸಿಎಂ, ಡಿಸಿಎಂ ಅವರದ್ದು ಒಳ್ಳೆಯ ಕಾಂಬಿನೇಷನ್ ಇದೆ. ರಾಜಣ್ಣ ರಾಯರೆಡ್ಡಿ ಯಾರಾದರೂ ಕೇಳಬಹುದು. ಆದರೆ ಎಲ್ಲಾ ನಿರ್ಧಾರ ಸಿಎಂ ಮತ್ತು ಡಿಸಿಎಂಗೆ ಬಿಟ್ಟದ್ದು ಎಂದರು.












Click it and Unblock the Notifications