ಬಳ್ಳಾರಿಯಲ್ಲಿ ಮಳೆಯಿಂದ ನೆಲಸಮವಾದ ನುಗ್ಗೆ ಗಿಡಗಳು
ಬಳ್ಳಾರಿ, ಅಕ್ಟೋಬರ್ 10: ಕೊರೊನಾ ಬಿಕ್ಕಟ್ಟಿನಿಂದಾಗಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಸಿಗದೆ ರೈತರು ಪರಿತಪಿಸುತ್ತಿರುವ ಈ ಹೊತ್ತಿನಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯೂ ಅವರನ್ನು ಕಷ್ಟಕ್ಕೆ ದೂಡಿದೆ. ಫಸಲಿಗೆ ಬಂದ ಬೆಳೆಗಳು ಮಳೆಯಿಂದಾಗಿ ನಾಶವಾಗಿದ್ದು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸುತ್ತಮುತ್ತ ಬಿರುಗಾಳಿ ಸಹಿತ ಮಳೆ ಸುರಿದು ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ.
ತಾಲೂಕಿನ ಬೇವಿನಹಳ್ಳಿ ತಾಂಡದ ರೈತ ಕೃಷ್ಣನಾಯಕ್ ಈ ಬಾರಿ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 700 ಗಿಡಗಳನ್ನು ಬೆಳೆಸಿದ್ದರು. ಇನ್ನೇನು ಫಸಲು ನೀಡುವ ಈ ಹೊತ್ತಲ್ಲಿ, ರಾತ್ರಿ ಸುರಿದ ಧಾರಾಕಾರ ಮಳೆ ಎಲ್ಲವನ್ನೂ ನಾಶಪಡಿಸಿದೆ. ಆಳೆತ್ತರಕ್ಕೆ ಬೆಳೆದು ನಿಂತಿದ್ದ ನುಗ್ಗೆ ಗಿಡಗಳು ನೆಲಸಮವಾಗಿವೆ. ಕೃಷಿ ಹೊಂಡ ಸಂಪೂರ್ಣ ತುಂಬಿ ಭತ್ತದ ಬೆಳೆಗಳಿಗೆ ನೀರು ನುಗ್ಗಿ ಕೆರೆಯಂತಾಗಿದೆ.
ಈ ಭಾಗದ ಬೇವಿನಹಳ್ಳಿ, ಉಚ್ಚಂಗಿ ದುರ್ಗದ ಹಳ್ಳಿಗಳಲ್ಲೂ ಭಾರಿ ಮಳೆಯಾಗಿದ್ದು, ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಗಳಿಗೆ ಸಂಚಕಾರ ತಂದಿದೆ. ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾದರೂ ಇಲ್ಲಿವರೆಗೂ ಕನಿಷ್ಠ ಸೌಜನ್ಯಕ್ಕೂ ಸಂಬಂಧಪಟ್ಟ ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಇತ್ತ ಸುಳಿದಿಲ್ಲ. ಇದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾದಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ಭಾರಿ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.












Click it and Unblock the Notifications